ರೈತರಿಗೆ ಪರಿಹಾರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 13
ಕಳಪೆ ಬೀಜ ಮಾರಾಟ ಮಾಡಿದ ಜಿಯೋ ಸೀಡ್ ಕಂಪನಿ ನೀಡಿರುವ ಪರಿಹಾರ ರೈತ ಸಂಘಟನೆಗಳು ನಡೆಸಿದ ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ ಮತ್ತು ಅನ್ನದಾತನಿಗೆ ಸಿಕ್ಕ ನ್ಯಾಯವೆಂದು ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ಪಟ್ಟಣದ ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಆವರಣದಲ್ಲಿ ಜಿಯೋಸೀಡ್ ಕಂಪನಿ ಬಿಡುಗಡೆ ಮಾಡಿದ ಪರಿಹಾರ ಮೊತ್ತದ ಚೆಕ್‌ನ್ನು ರೈತರಿಗೆ ವಿತರಿಸಿದ ಅವರು, ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಮಧ್ಯಸ್ಥಿಕೆ ಹಾಗೂ ಮಾಧ್ಯಮಗಳ ಸಹಕಾರದಿಂದ ರೈತರು ಪರಿಹಾರ ಪಡೆಯುವಂತಾಯಿತು. ಆದರೆ, ಎಲ್ಲವನ್ನೂ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾಗಿರುವುದು ಈ ದೇಶದ ರೈತನ ದುರ್ದೈವ. ಹೀಗಾಗಿ, ರೈತರು ತಮ್ಮ ಹಕ್ಕು ಪ್ರತಿಪಾದಿಸಲು ಹಿಂಜರಿಯಬಾರದು ಎಂದರು.
ಪ್ರಸಕ್ತ ವರ್ಷ ಎಕರೆಗೆ ಸುಮಾರು 30 ಕ್ವಿಂಟಲ್ ಗೋವಿನಜೋಳ ಇಳುವರಿ ಬಂದು, ರೈತರಿಗೆ ರು. 45 ಸಾವಿರ ತನಕ ಆದಾಯ ಸಿಗಬೇಕಿತ್ತು. ಜಿಯೋ ಸೀಡ್ ಕಂಪನಿ ಎಕರೆಗೆ ಕೇವಲ ರು. 10 ಸಾವಿರ ಪರಿಹಾರ ನೀಡಿದ್ದು, ಪರಿಹಾರದ ಮೊತ್ತ ತೃಪ್ತಿಕರವಾಗಿಲ್ಲ. ಅಲ್ಲದೆ, ಕಂಪನಿಯ ಕಳಪೆ ಹತ್ತಿ ಬೀಜದ ವಿರುದ್ಧವೂ ಸಮರ ಸಾರಿದ್ದು, ಸಂಕಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡದಿರುವ ಸರ್ಕಾರದ ಕ್ರಮ ಖಂಡಿಸಿ ನ. 25ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಘೇರಾವ್ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ಕಳಪೆ ಬೀಜಕ್ಕೆ ಕುಮ್ಮಕ್ಕು: ಹಸಿರು ಸೇನೆ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಕೇಂದ್ರ ಸರ್ಕಾರ ಪ್ರಕಟಿಸಿರುವ ತಪ್ಪು ಕೃಷಿ ನೀತಿಯಿಂದ ದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಶೇ. 60ರಷ್ಟು ಬೀಜಗಳು ಮೊಳಕೆಯೊಡೆದರೆ ಗುಣಮಟ್ಟದ ಬೀಜವೆಂದು ಪರಿಗಣಿಸುತ್ತಿದೆ. ಕಳಪೆ ಬೀಜ ಮಾರಾಟಕ್ಕೆ ಸರ್ಕಾರವೇ ಅನುಮತಿ ನೀಡಿದಂತಾಗಿದೆ ಎಂದರು.
ಕಂಪನಿಗೆ ಲಾಭವೇನು?: ಚಿಕ್ಕಪ್ಪ ಛತ್ರದ ಮಾತನಾಡಿ, ಬೀಜ ಮಾರಾಟ ಕಂಪನಿಗೂ ಜವಾಬ್ದಾರಿ ಇರಬೇಕು. ಪರೀಕ್ಷಿಸದೇ ಬೀಜಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಾರದು. ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದರೆ ಆಗುವ ಲಾಭವೇನು? ಬೆಳೆ ವೈಫಲ್ಯಕ್ಕೆ ಬೀಜವೊಂದೇ ಕಾರಣವಲ್ಲ, ಹವಾಮಾನ, ಮಳೆ, ತೇವಾಂಶ ಹಾಗೂ ಕೀಟಬಾಧೆ ಎಂಬ ವಿಜ್ಞಾನಿಗಳ ವರದಿ ಮಾನದಂಡವೇ? ತಂತ್ರಜ್ಞಾನ ಮುಂದುವರಿದಿದ್ದರೂ ಕೃಷಿಗೆ ಉಪಯೋಗ ಆಗುತ್ತಿಲ್ಲ ಎಂದರು.
ಕೆರೂಡಿ, ಕಲ್ಲೇದೇವರ ಗ್ರಾಮದ 86 ಎಕರೆ ಕೃಷಿಭೂಮಿಯಲ್ಲಿ ಬೆಳೆಹಾನಿ ಅನುಭವಿಸಿದ್ದ 33 ಫಲಾನುಭವಿಗಳಿಗೆ ರು. 8.60 ಲಕ್ಷ ಪರಿಹಾರ ವಿತರಿಸಲಾಯಿತು. ರುದ್ರಣ್ಣ ಮಲ್ಲಾಡದ, ಶಶಿಧರ ದೊಡ್ಮನಿ, ಮಲ್ಲೇಶ್ ಕರ್ಜಗಿ, ಶಂಕ್ರಪ್ಪ ಮಟ್ಟಿಮನಿ, ರಾಮನಗೌಡ ಪಾಟೀಲ, ಪರಮೇಶಪ್ಪ ಮತ್ತೂರ, ಬಸನಗೌಡ ಪಾಟೀಲ, ಶಿವು ದೊಡ್ಮನಿ, ಈಶ್ವರ ದೊಡ್ಮನಿ, ಪರಮೇಶ್ ದೊಡ್ಮನಿ, ರಮೇಶ್ ಮಲ್ಲಾಡದ ಇದ್ದರು. ಕಿರಣ ಸೋಗಿ ಸ್ವಾಗತಿಸಿದರು. ಪೂಜಾ ಸೋಗಿ ನಿರೂಪಿಸಿದರು. ಹಿರೇಮಠ ವಂದಿಸಿದರು.