ಬಾಲಾಪರಾಧ ನೀಗಲಿ, ಬಾಲಕಾರ್ಮಿಕ ಪದ್ಧತಿ ತೊಲಗಲಿ: ಪೀರಜಾದೆ
ಹಾನಗಲ್ಲ: ಬಾಲಾಪರಾಧ ಹಾಗೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿಡಲು ಹುನ್ನ್ನಾರ ನಡೆಸುವ ಸಮಾಜವಿರೋಧಿ ಶಕ್ತಿಗಳನ್ನು ನಿಗ್ರಹಿಸದ ಹೊರತು ಮಕ್ಕಳ ದಿನಾಚರಣೆಗೆ ಮಹತ್ವ ಸಿಗಲಾರದು ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಪೀರಜಾದೆ ಕಳಕಳಿ ವ್ಯಕ್ತಪಡಿಸಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ಏರ್ಪಡಿಸಿದ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆದೇ ಇದೆ. ಮೌಢ್ಯಗಳನ್ನು ದೂರ ಸರಿಸಿ ಸರ್ವರಿಗೆ ಸಮಬಾಳು ತತ್ವ ಸಾಕಾರಗೊಳ್ಳಬೇಕಾಗಿದೆ. ಬಾಲ ಕಾರ್ಮಿಕ ಪದ್ಧತಿ, ಬಾಲಾಪರಾಧಿ ಸಂಗತಿಗಳು ಜೀವಂತವಾಗಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಸಿಗದಿದ್ದರೆ ಇವು ನಶಿಸಲಾರವು ಎಂದರು.
ಸಾಹಿತಿ ಮಾರುತಿ ಶಿಡ್ಲಾಪುರ, ಕೇವಲ ಕಾನೂನಿನಿಂದ ಮೌಢ್ಯಗಳನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಉತ್ತಮ ಸಾಮಾಜಿಕ ವ್ಯವಸ್ಥೆಯಲ್ಲಿ ಬೆಳೆಸುವ ಅಗತ್ಯವಿದೆ. ಮಾಜಿ ಪ್ರಧಾನಿ ನೆಹರು ತಮ್ಮ ಜನ್ಮದಿನವನ್ನು ಮಕ್ಕಳ ಕಾಳಜಿಯ ದಿನವನ್ನಾಗಿ ಆಚರಿಸಲು ಸಲಹೆ ನೀಡಿ, ನಾಳಿನ ಭಾರತ ಕಟ್ಟುವ ಮಕ್ಕಳ ಬಗೆಗಿನ ಪ್ರೀತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಉಪನ್ಯಾಸಕರಾದ ಎಸ್.ಎಸ್. ಹೊನ್ನತ್ತಿ, ಟಿ. ಈಶ್ವರ, ವೀಣಾ ದೇವರಗುಡಿ, ಎಸ್.ವಿ. ರಶ್ಮಿ, ಡಿ.ಸಿ. ಹಿರೇಮಠ ಇದ್ದರು. ಶಫಿಯಾಬಾನು ಶಿರಮಾಪುರ, ವಿದ್ಯಾ ಬಿದರಮಳ್ಳಿ ಜಾಗೃತಿ ಗೀತೆ ಹಾಡಿದರು.