ಆಸ್ತಿ ದಾಖಲೆಯಲ್ಲಿ ದೋಷ: ಉಂಕಿ ಕುಟುಂಬದ ಪ್ರತಿಭಟನೆ
ಶಿಗ್ಗಾಂವಿ: ಆಸ್ತಿ ದಾಖಲಾತಿಯಲ್ಲಿ ಪುರಸಭೆ ಅಧಿಕಾರಿಗಳು ಲೋಪ-ದೋಷ ಮಾಡಿದ್ದಾರೆ ಎಂದು ಆರೋಪಿಸಿ ಪಟ್ಟಣದ ಅಂಕದಕಣ ಜಾಡಗೊಪ್ಪದವರ ಓಣಿಯ ನಿವಾಸಿಗಳಾದ ಶಂಕರೆಪ್ಪ ಉಂಕಿ ಕುಟುಂಬದ ಸದಸ್ಯರು ಪುರಸಭೆ ಮುಂದೆ ಎರಡು ದಿನಗಳ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳು ಪರಿಶೀಲನೆ ಮಾಡದೆ, ಯಾರ ಆಸ್ತಿ ಎಷ್ಟಿದೆ ಎಂಬುದನ್ನು ಸ್ಪಷ್ಟವಾಗಿ ಬರೆಯದೆ ಮನ ಬಂದಂತೆ ಆಸ್ತಿ ವಿವರ ನಮೂದು ಮಾಡಿದ್ದಾರೆ. ಈ ದೋಷ ಸರಿಪಡಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ಮಾಡಬೇಕು. ಆಸ್ತಿ ಫಾರಂ ಗಳನ್ನು ತಿದ್ದುಪಡಿಸಿ, ಹೊಸದಾಗಿ ಉತಾರ ನೀಡಬೇಕು ಎಂದು ಆಗ್ರಹಿಸಿದರು.
ಪುರಸಭೆ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಎಸ್.ಎ. ಚೌಗಲೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ ನ್ಯಾಯ ನೀಡುವುದಾಗಿ ಭರವಸೆ ನೀಡಿದ ಮೇಲೆ ಉಂಕಿ ಕುಟುಂಬದ ಸದಸ್ಯರು ಪ್ರತಿಭಟನೆ ಹಿಂಪಡೆದರು. ಶಂಕರಪ್ಪ ಗುರಪ್ಪ ಉಂಕಿ, ಶಿವಾನಂದ ಉಂಕಿ, ಬಸಮ್ಮ ಉಂಕಿ, ಬಸವರಾಜ ಉಂಕಿ, ನೀಲಾ ಬಾಗಲಕೋಟಿ, ಮಹಾಲಕ್ಷ್ಮೀ ಉಂಕಿ ಇದ್ದರು.