ಕನಕ ಜಯಂತಿಯಲ್ಲಿ ಅವ್ಯವಸ್ಥೆಆದರೆ ಪ್ರತಿಭಟನೆ: ಸೋಮಣ್ಣ
ಶಿಗ್ಗಾಂವಿ: ಕನಕರ ಜನ್ಮಸ್ಥಳ ಬಾಡದಲ್ಲಿ ನ. 20ರಂದು ಭಕ್ತ ಕನಕದಾಸರ ಜಯಂತಿ ಆದ್ಧೂರಿಯಾಗಿ ನಡೆಯಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ಆಗರವಾದಲ್ಲಿ ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಕಚೇರಿಯಲ್ಲಿ ಕನಕದಾಸರ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಧಿಕಾರಿ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ದಾರ್ಶನಿಕರ ಜಯಂತಿ ಅವ್ಯವಸ್ಥೆ ಗೂಡಾಗಿತ್ತು. ಈ ಬಾರಿಯೂ ಇದೇ ಸ್ಥಿತಿ ಎದುರಾದಲ್ಲಿ ತಹಸೀಲ್ದಾರರೇ ಹೊಣೆ ಎಂದರು.
ಇಂಥ ಪೂರ್ವಭಾವಿ ಸಭೆಗಳಿಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳೇ ಹೊಣೆ ವಹಿಸಿಕೊಂಡು ಕನಕ ಜಯಂತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ತಪ್ಪಿದಲ್ಲಿ ಸರ್ಕಾರಕ್ಕೆ ದೂರು ನೀಡಿ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.
ವ್ಯವಸ್ಥೆ ಕಲ್ಪಿಸಿ: ಆಚರಣೆ ನಿಮಿತ್ತ ಶಿಗ್ಗಾವಿ-ಬಂಕಾಪುರ ಪಟ್ಟಣ ಹಾಗೂ ಬಾಡ ಗ್ರಾಮದವರೆಗೆ ದಾರಿಯುದ್ದಕ್ಕೂ ಕನಕದಾಸರ ಜಯಂತಿ ಬ್ಯಾನರ್ ಅಳವಡಿಸಬೇಕು. ಅಲ್ಲಿ ಊಟ, ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ಬಿದ್ದಲ್ಲಿ ಕೊಳವೆ ಬಾವಿ ಕೊರೆಸುವಂತೆ ಜಿಪಂ ಅಧಿಕಾರಿಗಳಿಗೆ ಸೋಮಣ್ಣ ಸೂಚಿಸಿದರು.
ತಾಪಂ ಅಧ್ಯಕ್ಷೆ ಸುಜಾತ ಕಲಕಟ್ಟಿ ಮಾತನಾಡಿದರು. ಜಯಂತಿ ಕಾರ್ಯಕ್ರಮ ಮಾಡಿ ಕೈತೊಳೆದು ಕೊಳ್ಳುವ ಕಾಗಿನೆಲೆ ಪ್ರಾಧಿಕಾರ, ಕನದಾಸರ ಮೋಹನ ತರಂಗಿಣಿ ಕೃತಿ ಓದುಗರಿಗೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಡಾ ಬಿ.ಎಚ್. ವೀರಣ್ಣ ಒತ್ತಾಯಿಸಿದರು. ಸದಸ್ಯ ತಿಪ್ಪಣ್ಣ ಸಾತಣ್ಣನವರ, ಜಿಪಂ ಮಾಜಿ ಸದಸ್ಯ ಎಂ.ಎಸ್. ಹಳವಳ್ಳಿ, ಶಿಸ್ತುಬದ್ಧವಾಗಿ ಕಾರ್ಯಕ್ರಮ ಮಾಡುವಂತೆ ಸಲಹೆ ನೀಡಿದರು.
ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟಿ, ಜಿಪಂ ಸದಸ್ಯ ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣನವರ, ಸರೋಜವ್ವ ಆಡಿನ, ಸಿ.ಎಸ್. ಪಾಟೀಲ, ತಾಪಂ ಉಪಾಧ್ಯಕ್ಷ ನಿಂಗಪ್ಪ ಹರಿಜನ, ಸದಸ್ಯರಾದ ಶಾಂತಮ್ಮ ಬೊಮ್ಮನಹಳ್ಳಿ, ಸುಗಂಧಾಬಾಯಿ ಘೋಡಕೆ, ನಿಂಗಪ್ಪ ಜವಳಿ, ವೀರನಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಆಡಿನ, ಕುರುಬ ಸಮಾಜದ ಅಧ್ಯಕ್ಷ ಹುಚ್ಚಪ್ಪ ಭರಮಣ್ಣನವರ, ಮುಖಂಡರಾದ ರಾಮಣ್ಣ ರಾಣೋಜಿ, ಸತೀಶ ಆಲದಕಟ್ಟಿ, ಎಂ.ಎನ್. ಹೊನಕೇರಿ, ಗಂಗಾಧರ ಸಾತಣ್ಣನವರ, ಮಲ್ಲಪ್ಪ ನೀಲಗುರಿ, ಫಕ್ಕೀರೇಶ ಶಿಗ್ಗಾಂವ, ಅಶೋಕ ಕಾಳೆ, ಮುಖ್ಯಾಧಿಕಾರಿ ಡಿ.ಎನ್. ಧರಣೆಂದ್ರಕುಮಾರ, ಜಿ. ಬಸವರಾಜ ಇದ್ದರು.