ಶಾದಿಭಾಗ್ಯ: ಇಂದು ಧರಣಿ
ರಾಣಿಬೆನ್ನೂರು: ಸರ್ಕಾರ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆಯನ್ನು ಎಲ್ಲ ಸಮುದಾಯದ ಬಡವರಿಗೆ ವಿಸ್ತರಿಸಬೇಕೆಂದು ಆಗ್ರಹಿಸಿ ನ. 16ರಂದು ಬೆಳಗ್ಗೆ 11 ಗಂಟೆಗೆ ಕೆಇಬಿ ಗಣೇಶ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಗೌರವಾಧ್ಯಕ್ಷ ಪ್ರಣವಾನಂದರಾಮ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದ ಸಮಸ್ತ ಜಾತಿ-ಜನಾಂಗದವರ ಕಲ್ಯಾಣಕ್ಕಾಗಿ ಮಹತ್ವದ ಯೋಜನೆಗಳನ್ನು ಜಾರಿಗೆ ತರುವ ಬದಲಾಗಿ ಮುಸ್ಲಿಂ ವೋಟ್ ಬ್ಯಾಂಕ್ ಲಾಭಕ್ಕಾಗಿ, ಮುಸ್ಲಿಂ ಹಾಗೂ ಹಿಂದೂಗಳಲ್ಲಿರುವ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಯೋಜನೆಯಾದ ಶಾದಿಭಾಗ್ಯ ಜಾರಿಗೆ ತಂದು ರಾಜ್ಯದ ಸಮಸ್ತ ಹಿಂದು-ಮುಸ್ಲಿಂ ಸಮುದಾಯದವರ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿಯನ್ನು ಸುಟ್ಟು ಪ್ರತಿಭಟಿಸುತ್ತೇವೆ ಎಂದರು. ಡಾ ಬಸವರಾಜ ಹಡಪದ, ನೀಲಪ್ಪ ಲಮಾಣಿ, ವಿಜಯ ಬಾವಾ, ವಿವೇಕಾನಂದ ಪಾಲನಕರ ಇದ್ದರು.
ಮಗನ ತಲೆ ಮೇಲೆ ಚಪ್ಪಡಿ ಎಸೆದ ಅಪ್ಪ
ಬ್ಯಾಡಗಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನ ತಲೆ ಮೇಲೆ ತಂದೆಯೇ ಚಪ್ಪಡಿ ಕಲ್ಲೆಸೆದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಕಲ್ಲೇಟಿಗೆ ಒಳಗಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹ್ಮದ ಗೌಸ್‌ಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಹಬೂಬ್ ಸಾಬ್ ಬಿಲೋರಿ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕೈ ಕೊಯ್ದುಕೊಂಡ!: ಹಲವಾರು ದಿನಗಳಿಂದ ತಂದೆ-ಮಗನ ನಡುವೆ ಅಗಾಗ್ಗೆ ಜಗಳ ನಡೆಯುತ್ತಿತ್ತು. ಮಗನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಬಿಲೋರಿ ಗುರುವಾರ ರಾತ್ರಿ ಎಲ್ಲರೂ ಮಲಗಿದ ಬಳಿಕ ಮಗನ ತಲೆ ಮೇಲೆ ಚಪ್ಪಡಿ ಎಸೆದಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ತನ್ನ ಕೈಯನ್ನೇ ಕೊಯ್ದುಕೊಂಡಿದ್ದ ಬಿಲೋರಿಯನ್ನೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿಂದೆಯೂ ಶಿಕ್ಷೆ ಆಗಿತ್ತು
ಆರೋಪಿ ಬಿಲೋರಿ 2010ರ ಮೇ 21ರಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮೆಲೆ ಹಲ್ಲೆ ನಡೆಸಿದ್ದ. ಪ್ರಕರಣದಲ್ಲಿ 34 ದಿನಗಳ ಕಾರಾಗೃಹ ಶಿಕ್ಷೆಯಾಗಿತ್ತು.
ರಾಜಣ್ಣ ನಿಧನ: ಸಂತಾಪ
ಹಾವೇರಿ: ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ರಾಜಣ್ಣ ಶಿದ್ದಪ್ಪ ಪುರದ (55) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಪುತ್ರಿ, ಇಬ್ಬರುಪುತ್ರರು ಇದ್ದಾರೆ. ನಗರದ ವೀರಶೈವ ರುದ್ರಭೂಮಿಯಲ್ಲಿ ಶನಿವಾರ ಬೆಳಗ್ಗೆ 10ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನೆಹರು ಯುವ ಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.