ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುವರ್ಣಸೌಧಕ್ಕೆ ಮುತ್ತಿಗೆ

Lingaraj Badiger
Updated On : 16 Nov 2013, 11:42 am

ಕನ್ನಡಪ್ರಭ ವಾರ್ತೆ, ಹಾವೇರಿ, ನ. 15
ರೈತರ ಹಿತ ಕಾಯುವಲ್ಲಿ ವಿಫಲವಾದ ಹಾಗೂ ಗ್ರಾಮೀಣ ಜನರ ಸಮಸ್ಯೆ ಪರಿಹರಿಸುವಲ್ಲಿ ಯಾವುದೇ ಯೋಜನೆ ಅನುಷ್ಠಾನಗೊಳಿಸದ ರಾಜ್ಯ ಸರ್ಕಾರದ ವಿರುದ್ಧ ನ. 25ರಂದು ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ಮೊದಲ ದಿನ ಸುವರ್ಣ ಸೌಧಕ್ಕೆ ಲಕ್ಷ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಗಾಲ ನಿಭಾಯಿಸುವಲ್ಲಿ ಎಡವಿದೆ. ನೀರಾವರಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಕೇಂದ್ರ ಸರ್ಕಾರ ರು. 150 ಕೋಟಿ ಹಣ ಬಿಡುಗಡೆ ಮಾಡಿದರೂ ಅದು ಜನರಿಗೆ ಮುಟ್ಟಿಲ್ಲ. ನೀರಾವರಿ ಯೋಜನೆಗಳನ್ನು ಕಡೆಗಣಿಸಲಾಗಿದೆ. ರಾಜ್ಯ ಬಜೆಟ್‌ನ ಶೇ. 25 ಭಾಗವನ್ನು ನೀರಾವರಿ ಯೋಜನೆಗೆ ಮೀಸಲಿಡಬೇಕು. ದೇಶದಲ್ಲಿ ಬರಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ 3 ಸಾವಿರ ಟಿಎಂಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ಇದರಲ್ಲಿ ಒಂದಿಷ್ಟನ್ನು ಬಳಸಿಕೊಂಡರೂ ಬರಮುಕ್ತ ರಾಜ್ಯ ನಮ್ಮದಾಗುತ್ತದೆ ಎಂದರು.
ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದ್ದ ನೀರಿನ ಬಳಕೆಯೇ ನಮ್ಮಿಂದಾಗಿಲ್ಲ. ಕೋಯ್ನಾ ಹಾಗೂ ಗೋದಾವರಿ ನೀರಿನಲ್ಲಿ ನಮಗೆ ಹಕ್ಕಿದ್ದರೂ ಕೇಳುವ ಸ್ಥಿತಿಯಲ್ಲಿ ನಾವಿಲ್ಲ. ಒಣ ಭೂಮಿಗೆ ನೀರು ಕೊಡುವುದರಿಂದ ಬರ ತಡೆಗಟ್ಟಲು ಖಂಡಿತ ಸಾಧ್ಯವಿದೆ ಎಂದರು.
ಜೋಳ ಮತ್ತು ಬತ್ತಕ್ಕೆ ಸರ್ಕಾರ ಬೆಂಬಲ ಬೆಲ ನೀಡಬೇಕು. ಬಿಟಿ ಹತ್ತಿ ಬೆಳೆ ವಿಫಲವಾಗಿದೆ. ಮಹಿಕೋ ಕಂಪನಿಯನ್ನು ಮಾನ್ಸೆಂಟೋ ಖರೀದಿಸಿದೆ. ದೇಶೀಯ ಟೈಟಲ್‌ನಲ್ಲಿ ಕನಕ, ಚಿರಂಜೀವಿ, ರುದ್ರ, ಮಹದೇವ, ನಿಕ್ಕಿ ಪ್ಲಸ್ ಎನ್ನುವ ಹೆಸರಿನಲ್ಲಿ ಬೀಟಿ ಬೀಜಗಳನ್ನು ಬಿಡುಗಡೆ ಮಾಡಿ ಲಾಭ ಮಾಡುವ ಉದ್ದೇಶ ಹೊಂದಿದೆ. ಕಂಪನಿಗಳು ವಿತರಿಸಿದ ಕಳಪೆ ಬೀಜಗಳಿಂದ ಅಪಾರ ಹಾನಿ ಅನುಭವಿಸಿದ್ದು, ಸರ್ಕಾರ ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿದೆ. ಕಳಪೆ ಬೀಜ ವಿತರಿಸಿದ ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್ ಮಾಡುವವರೆಗೂ ರೈತರಿಗೆ ನ್ಯಾಯ ಸಿಗುವುದಿಲ್ಲ. ಹಾನಿ ಅನುಭವಿಸಿದ ರೈತರಿಗೆ ಸರ್ಕಾರ ಎಕರೆಗೆ ರು. 30 ಸಾವಿರ ಪರಿಹಾರ ನೀಡಬೇಕು. ಕಬ್ಬಿಗೆ ನಿಗದಿಪಡಿಸಿದ ದರ ಅವೈಜ್ಞಾನಿಕವಾಗಿದೆ. ಈ ದರ ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಮೀನಾಕ್ಷಿ ಕೋಡಿಹಳ್ಳಿ, ರವೀಂದ್ರಗೌಡ ಪಾಟೀಲ, ಸುರೇಶ ಗರಡಿಮನಿ, ಮಲ್ಲೇಶಪ್ಪ ಬಿಳೆಯಲಿ, ಈಶಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement