ಶಿಗ್ಲಿ ಬಸ್ಯಾ ಪಾದಯಾತ್ರೆ!
ಕನ್ನಡಪ್ರಭ ವಾರ್ತೆ, ಹಾವೇರಿ, ನ. 16
ಮರ, ಟವರ್ ಏರಿ ಪ್ರತಿಭಟನೆ ನಡೆಸುತ್ತಿದ್ದ ಶಿಗ್ಲಿ ಬಸ್ಯಾ ಈಗ ಜೈಲು ಹಕ್ಕಿಗಳ ಬಿಡುಗಡೆ ಹಾಗೂ ಜೈಲು ಸುಧಾರಣೆಗೆ ಆಗ್ರಹಿಸಿ ಮತ್ತೊಂದು ರೀತಿಯ ಪ್ರತಿಭಟನೆ ಹಮ್ಮಿಕೊಂಡಿದ್ದಾನೆ. ತನ್ನ ಐವರು ಮಕ್ಕಳೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿರುವ ಬಸ್ಯಾ, ನ್ಯಾಯ ಪಡೆದೇ ವಾಪಸ್ ಬರುತ್ತೇನೆ ಎಂಬ ವಿಶ್ವಾಸ ನುಡಿ ಆಡುತ್ತಿದ್ದಾನೆ.
ತನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಶಿಗ್ಲಿ ಬಸ್ಯಾ ಆಗಾಗ ಮರವೇರಿ ಪ್ರತಿಭಟನೆ ಮಾಡಿದ್ದನ್ನು ನೋಡಿದ್ದೇವೆ. ಈ ಬಾರಿ, ತನ್ನಂತೆ ನಿರಪರಾಧಿಗಳಾಗಿ ಜೈಲಿನಲ್ಲಿ ಕೊಳೆಯುತ್ತಿರುವವರ ಬಿಡುಗಡೆಗೆ ಆಗ್ರಹಿಸಿ ರಾಜಧಾನಿಗೆ ಪಾದಯಾತ್ರೆ ಆರಂಭಿಸಿದ್ದಾನೆ. ಮೂರು ದಿನಗಳ ಹಿಂದೆ ಧಾರವಾಡದಿಂದ ಹೊರಟಿರುವ ಬಸ್ಯಾ, ಶನಿವಾರ ಹಾವೇರಿ ತಲುಪಿದ್ದಾನೆ. ಇನ್ನು 30ರಿಂದ 35 ದಿನಗಳಲ್ಲಿ ಬೆಂಗಳೂರಿಗೆ ತಲುಪಿ, ಅಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದ್ದಾನೆ.
ಶಿಗ್ಲಿ ಬಸ್ಯಾ ಪಾದಯಾತ್ರೆ ನಡುವೆ ಪತ್ರಿಕೆಯೊಂದಿಗೆ ಮಾತನಾಡಿ, ತನ್ನ ಈ ಹೋರಾಟದ ಉದ್ದೇಶ ವಿವರಿಸಿದ್ದಾನೆ. ನಿರಪರಾಧಿಗಳು ಹೊರಬರಬೇಕು. ಅಪರಾಧಿಗಳು ಬಯಲಲ್ಲಿ, ನಿರಪರಾಧಿಗಳು ಜೈಲಲ್ಲಿ ಎಂಬಂತಾಗಿದೆ. ಶ್ರೀಮಂತರು ಹಣ ಕೊಟ್ಟು ವಕೀಲರನ್ನು ಇಟ್ಟುಕೊಂಡು ನ್ಯಾಯಾಲಯದಲ್ಲಿ ವಾದಿಸಿ ಹೊರಬರುತ್ತಿದ್ದಾನೆ. ಆದರೆ ಬಡವರು ತಪ್ಪು ಮಾಡದಿದ್ದರೂ ಹತ್ತಾರು ವರ್ಷ ಜೈಲಿನಲ್ಲೇ ಕೊಳೆಯುವ ಸ್ಥಿತಿಯಿದೆ. ಇದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ ಇರಬೇಕು. ಆದ್ದರಿಂದ ರಾಜ್ಯಪಾಲರು, ಮುಖ್ಯಮಂತ್ರಿ, ನ್ಯಾಯಾಧೀಶರನ್ನು ಕಂಡು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ. ಈ ಹೋರಾಟದಲ್ಲಿ ನ್ಯಾಯ ಪಡೆದೇ ತೀರುತ್ತೇನೆ. ಬೆಂಗಳೂರಿನಲ್ಲಿ ಇದಕ್ಕೆ ಫಲ ಸಿಗದಿದ್ದರೆ ದಿಲ್ಲಿವರೆಗೂ ಪಾದಯಾತ್ರೆ ಮಾಡುವಷ್ಟು ಶಕ್ತಿ, ಛಲ ನನ್ನಲ್ಲಿದೆ ಎಂದು ಆತ್ಮವಿಶ್ವಾಸದ ಮಾತನಾಡುತ್ತಾನೆ.
ಅಸಹಾಯಕರಿಗೆ ನೆರವು
ಕಳ್ಳತನ ಹೇಸಿಗೆ ತರುತ್ತದೆ. ಈ ಹಿಂದೆ ನಾನೂ ಕಳ್ಳತನ ಮಾಡಿದ್ದೇನೆ. ಜನರ ಕೈಗೆ, ಪೊಲೀಸರಿಗೆ ಸಿಕ್ಕು ಜೈಲಿಗೂ ಹೋಗಿದ್ದೇನೆ. ನನ್ನಷ್ಟು ತೂಕದ ಚಿನ್ನ ಕದ್ದರೂ ಕಿರುಬೆರಳಿನಷ್ಟೂ ಉಳಿಸಿಕೊಂಡಿಲ್ಲ. ಸಮಾಜದಲ್ಲಿನ ಅಸಹಾಯಕರಿಗೆ ನೆರವು ಮಾಡಿದ್ದೇನೆ. ಮಾಡಿರುವ ತಪ್ಪನ್ನು ನಾನು ಒಪ್ಪಿಕೊಂಡು ಪರಿವರ್ತನೆಯಾಗಿದ್ದೇನೆ. ಈಗಲಾದರೂ ನನಗೆ ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಸಿಗಬೇಕು. ನನ್ನ ತಪ್ಪಿಗೆ ಹೆಂಡತಿ- ಮಕ್ಕಳು ಉಪವಾಸ ಬೀಳಬಾರದು. ನನ್ನ ಮೇಲಿದ್ದ 254 ಪ್ರಕರಣಗಳ ಪೈಕಿ 250ರಲ್ಲಿ ನಾನೇ ಸ್ವತಃ ವಾದಿಸಿ ಗೆಲುವು ಪಡೆದಿದ್ದೇನೆ. ಇನ್ನುಳಿದ 4 ಕೇಸುಗಳನ್ನೂ ಗೆಲ್ಲುವ ವಿಶ್ವಾಸವಿದೆ. ಆದರೆ ಅನೇಕರಿಗೆ ಕಾನೂನಿನ ಬಗ್ಗೆ ಜ್ಞಾನವಿಲ್ಲ. ಅವರಿಂದ ಹೊರಬರಲು ಆಗುತ್ತಿಲ್ಲ. ಜೈಲಿನಲ್ಲಿದ್ದಾಗಿನ ಅನೇಕ ಸಹಪಾಠಿಗಳನ್ನು ಹೊರತರುವುದು ಪಾದಯಾತ್ರೆಯ ಉದ್ದೇಶ ಎಂದು ಬಸ್ಯಾ ವಿವರಿಸುತ್ತಾನೆ.
ಪೊಲೀಸ್ ವ್ಯವಸ್ಥೆ ನಂಬಲ್ಲ
ಪೊಲೀಸ್ ವ್ಯವಸ್ಥೆ ಬಗ್ಗೆ ನಂಬಿಕೆಯೇ ಇಲ್ಲ. ಜೈಲಿನಲ್ಲಿ ಶ್ರೀಮಂತರಿಗೆ ಐಷಾರಾಮಿ ಜೀವನ ನಡೆಸಲು ಸಾಧ್ಯವಾದರೆ ಬಡವರು ಅವರ ಕಾಲು ಒತ್ತಬೇಕು. ಅಧಿಕಾರಿಗಳೂ ಶ್ರೀಮಂತರ ಪರವಾಗಿದ್ದಾರೆ. ಯಾವ ರೌಡಿ, ರಾಜಕಾರಣಿಯೂ ಜೈಲಲ್ಲಿಲ್ಲ. ನಮ್ಮಂಥ ಬಡಪಾಯಿಗಳಿದ್ದಾರೆ. ಪೊಲೀಸರಿಗೇ ರಕ್ಷಣೆ ನೀಡಬೇಕಾಗಿದೆ ಎಂದು ಬಸ್ಯಾ ತನ್ನ ಸಿಟ್ಟನ್ನು ಹೊರಹಾಕಿದ. ಉನ್ನತ ಸ್ಥಾನದಲ್ಲಿರುವವರು ಜೈಲಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನಿರಪರಾಧಿಗಳನ್ನು ಕೇಸಿನಲ್ಲಿ ಸಿಕ್ಕಿಸಿ ಒಳಹಾಕುವ ಪ್ರವೃತ್ತಿ ನಿಲ್ಲಬೇಕು. ನನ್ನ ಹೋರಾಟಕ್ಕೆ ಹೆಂಡತಿ, ಮಕ್ಕಳೂ ಸಾಥ್ ನೀಡಿದ್ದಾರೆ. ನ್ಯಾಯ ಪಡೆಯುತ್ತೇನೆ ಎನ್ನುತ್ತಾ ಬಸ್ಯಾ ಪಾದಯಾತ್ರೆ ಮುಂದುವರಿಸಿದ.