ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಎಸ್ಟಿ ಪ್ರಮಾಣಪತ್ರ ನೀಡಲು ವಿಳಂಬ

Lingaraj Badiger
Updated On : 18 Nov 2013, 10:46 am

ಹಾವೇರಿ: ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ವಾಲ್ಮೀಕಿ ಜನಾಂಗದವರಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಲು ದಾಖಲೆಗಳ ನೆಪವೊಡ್ಡಿ ವಿನಾಕಾರಣ ಸತಾಯಿಸುತ್ತಿದ್ದು, ಜಿಲ್ಲಾಧಿಕಾರಿಗಳು ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿ ಪರಶುರಾಮ ಅಗಡಿ ಹಾಗೂ ನಗರಸಭೆ ಮಾಜಿ ಸದಸ್ಯ ವೆಂಕಟೇಶ ಇಟಗಿ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಳವಾರ ಮತ್ತು ಪರಿವಾರ ಎನ್ನುವುದು ಜಾತಿಯಲ್ಲ. ಅದು ಸೇವೆ, ಕುಲ ಕಸುಬು. ಹಿಂದೆ ಅರಸೊತ್ತಿಗೆ ಸರ್ಕಾರ ಮತ್ತು ಬ್ರಿಟಿಷ್ ಆಡಳಿತದಲ್ಲಿ ವಾಲ್ಮೀಕಿ ಜನಾಂಗದವರು ಪೊಲೀಸ್ ಮತ್ತು ಸುದ್ದಿ ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಅದಕ್ಕೆ ತಳವಾರ, ತಳವಾರಕಿ, ಓಲೇಕಾರ, ವಾಲೀಕಾರ, ವಾಲೀಕಾರಕಿ ಎಂದು ಕರೆಯುತ್ತಿದ್ದರು. ವಾಲ್ಮೀಕಿ, ಬೇಡ, ಬೇಡರ, ನಾಯಕ್ ಜನಾಂಗದ ಕುಲಕಸುಬನ್ನೇ ತಳವಾರ ಅಂತ ಇದ್ದುದ್ದನ್ನು ಅವರ ಜಾತಿ ಎಂದು ತಪ್ಪಾಗಿ ದಾಖಲಾಗಿದೆ ಎಂದು ಆರೋಪಿಸಿದರು.
ಸಚಿವರ ಸೂಚನೆ ಧಿಕ್ಕಾರ
ಜಿಲ್ಲೆಯ ಕಂದಾಯ ಅಧಿಕಾರಿಗಳು ತಳವಾರ ಎನ್ನುವ ಶಬ್ದವನ್ನು ಅಪಾರ್ಥ ಮಾಡಿಕೊಂಡು ವಾಲ್ಮೀಕಿ (ಪರಿಶಿಷ್ಟ ಪಂಗಡ) ಜಾತಿ ಪ್ರಮಾಣ ಪತ್ರ ನೀಡಲು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಪರಿಶಿಷ್ಟ ಪಂಗಡದವರಿಗೆ ಪ್ರಮಾಣಪತ್ರ ನೀಡಲು ಸತಾಯಿಸದಂತೆ ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ಅವರ ಸೂಚನೆ ಧಿಕ್ಕರಿಸಿದ್ದಾರೆ ಎಂದು ದೂರಿದರು.
ನೇಮಕಾತಿ, ಶೈಕ್ಷಣಿಕ ಹಾಗೂ ಇತರೇ ಮೀಸಲಾತಿ ಅಧಿನಿಯಮದ ಅಡಿಯಲ್ಲಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಾಗ ಶಾಲಾ ದಾಖಲೆಗಳು ಇಲ್ಲದಿದ್ದರೆ ಸ್ಥಾನಿಕ ಪರಿಶೀಲನೆ ಮಾಡಿ ಪಂಚರ ಹೇಳಿಕೆ ಪಡೆದು ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಎಂದಿದೆ. ಇದನ್ನೂ ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಆರೋಪಿಸಿದರು.
ಹೈಕೋರ್ಟಲ್ಲಿ ಪಿಐಎಲ್: ಎಚ್ಚರಿಕೆ
ಅಧಿಕಾರಿಗಳ ಈ ಧೋರಣೆಯಿಂದ ವಾಲ್ಮೀಕಿ ಜನಾಂಗದ ಬಡವಿದ್ಯಾರ್ಥಿಗಳ ಶೈಕ್ಷಣಿಕ, ಸರ್ಕಾರಿ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಡ್ಡಿಯಾಗಿದೆ. ಜಿಲ್ಲೆಯ ಹಾವೇರಿ, ಹಿರೇಕೆರೂರು, ಬ್ಯಾಡಗಿ ತಾಲೂಕುಗಳಲ್ಲಿ ರಾಜ್ಯ ಸಚಿವಾಲಯದ ಅಧಿಕಾರಿಗಳು ಎರವಲು ಸೇವೆಯ ಮೇಲೆ ತಹಸೀಲ್ದಾರ್ ಎಂದು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಕಂದಾಯ ಇಲಾಖೆಗಳ ವ್ಯಾಪ್ತಿಯ ಕೆಲಸಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದ್ದರಿಂದ ಈ ಅಧಿಕಾರಿಗಳನ್ನು ತಮ್ಮ ಮಾತೃ ಇಲಾಖೆಗೆ ಮರಳಿ ಕಳುಹಿಸಿ ಕಂದಾಯ ಇಲಾಖೆಯಲ್ಲಿರುವ ಕೆಎಎಸ್ ಅಧಿಕಾರಿಗಳನ್ನು ತಹಸೀಲ್ದಾರ್‌ರನ್ನಾಗಿ ನೇಮಕಗೊಳಿಸಬೇಕು. ಹಾವೇರಿ ತಹಸೀಲ್ದಾರ್ ಕಚೇರಿಯಲ್ಲಿ 20 ವರ್ಷಗಳಿಂದ ಬೀಡು ಬಿಟ್ಟಿರುವ ವಿವಿಧ ಹಂತದ ನೌಕರರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಈ ಎಲ್ಲ ವಿಷಯಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಅಗಡಿ ಹಾಗೂ ಇಟಗಿ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement