ಕಳೆ ನಿಯಂತ್ರಣ ತಂತ್ರಜ್ಞಾನ ಒದಗಿಸಲು ರೈತರ ಮನವಿ
ಹಾವೇರಿ: ಬಿತ್ತನೆ ಹತ್ತಿ ಬೀಜದಲ್ಲಿ ಜೈವಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಕಳೆ ನಿಯಂತ್ರಣ ತಂತ್ರಜ್ಞಾನ ಒದಗಿಸುವಂತೆ ಆಗ್ರಹಿಸಿ ತಾಲೂಕಿನ ಕರ್ಜಗಿಯಲ್ಲಿ ರೈತರು ಶಾಸಕ ರುದ್ರಪ್ಪ ಲಮಾಣಿಗೆ ಮನವಿ ಸಲ್ಲಿಸಿದರು.
ಹತ್ತಿಯಲ್ಲಿ ಕಾಯಿ ಕೊರೆಯುವ ಹುಳುಗಳ ಬಾಧೆ ಕಂಡುಬಂದಾಗ ಹಲವು ರೈತರು ಹತ್ತಿ ಬೆಳೆಯುವುದನ್ನೇ ಕೈಬಿಟ್ಟಿದ್ದರು. ಈ ಸಮಸ್ಯೆಗೆ ಬಿ.ಟಿ ತಂತ್ರಜ್ಞಾನ ಪರಿಹಾರದ ರೂಪದಲ್ಲಿ ಬಳಕೆಗೆ ಬಂತು. ಪ್ರಸ್ತುತ ಕೂಲಿ ದರ, ಕೂಲಿಯಾಳುಗಳ ಸಮಸ್ಯೆಯಿಂದ ಕಳೆ ನಿಯಂತ್ರಣ ಸಮಸ್ಯೆಯಾಗಿದೆ, ರೈತರಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆ ನಿವಾರಣೆಗೆ ಪರಿಣಾಮಕಾರಿಯಾಗಿರುವ ಮಾನ್ಸೆಂಟೋ ಇಂಡಿಯಾ ಕಂಪನಿ ಅಭಿವೃದ್ಧಿ ಪಡಿಸಿದ ಬೋಲ್ಗಾರ್ಡ್-2 ರೌಂಡಪ್ ರೆಡಿ ಪ್ಲೆಕ್ಸ್ ತಂತ್ರಜ್ಞಾನವನ್ನು ರೈತರಿಗೆ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.
ರೈತರಾದ ಶಿವನಗೌಡ ಪಾಟೀಲ್, ನಿಂಗಪ್ಪ ಜಾಡರ್, ವೀರಣ್ಣ ಕಳ್ಳಿಹಾಳ, ಸಿದ್ದಪ್ಪ ಸೊಪ್ಪಿನ್, ಪ್ರವೀಣ ಹಾವೇರಿ, ಕುಮಾರ ಗುಮಗಂದಿ, ಸುರೇಶ ಪುಟ್ಟಪ್ಪನವರ್, ಫಕ್ಕಿರಪ್ಪ ಹಾವೇರಿ, ಸುರೇಶ ಮಾನೇಗಾರ, ಚಿಕ್ಕಪ್ಪ ಗಂಗಮ್ಮನವರ್ ಇದ್ದರು.