ಬಸವೇಶ್ವರ, ಚನ್ನಮ್ಮ ಪುತ್ಥಳಿ ಸಿದ್ಧ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 17
ಪಟ್ಟಣದ ಕುಮಾರೇಶ್ವರ ವಿರಕ್ತಮಠದ ಪರಿಸರದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಡಿ. 11ರಿಂದ 27ರ ವರೆಗೆ ಪ್ರವಚನ, ಸಾಂಸ್ಕೃತಿಕ ಸಿರಿ, ಮಠಾಧೀಶರು, ಗಣ್ಯರ ಸಂದೇಶದೊಂದಿಗೆ ಪುತ್ಥಳಿ ಅನಾವರಣ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಭಾನುವಾರ ಮಠದ ಆವರಣದಲ್ಲಿ ಸುದ್ದಿಗಾರರಿಗೆ ವಿವರ ನೀಡಿದ ಅವರು, ಹಾನಗಲ್ಲಿನಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣಕ್ಕೆ ಅಪೇಕ್ಷೆ ಇತ್ತು. ಹೀಗಾಗಿ, ಕಂಚಿನ ಪುತ್ಥಳಿಗಳನ್ನು ಮಠದ ಆವರಣದಲ್ಲಿ ಅನಾವರಣ ಮಾಡಲು ಸಜ್ಜುಗೊಳಿಸಲಾಗುತ್ತಿದೆ. ಇಬ್ಬರು ಮಹಾತ್ಮರ ಪುತ್ಥಳಿ ಅಲಂಕಾರ ಕಾರ್ಯ ಭರದಿಂದ ಸಾಗಿದೆ. ಡಿ. 23ರಂದು ಅವುಗಳನ್ನು ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರವಚನ ಪ್ರಾರಂಭ
ಕಾರ್ಯಕ್ರಮದ ಅಂಗವಾಗಿ ಡಿ. 11ರಿಂದ 22ರ ವರೆಗೆ ರಾಜೂರಿನ ಪ್ರಖ್ಯಾತ ಪ್ರವಚನಕಾರ ಕುಮಾರ ದೇವರು- ಶರಣರು ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ದರ್ಶನ ಕುರಿತು ಪ್ರವಚನ ನಡೆಸಿಕೊಡುವರು. ಡಿ. 23ರಿಂದ 27ರ ವರೆಗೆ ಜಗಜ್ಯೋತಿ ಬಸವೇಶ್ವರ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಜೀವನ ಕಥೆಯನ್ನು ಒಳಗೊಂಡ ನಾಟಕ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಸಂಗೀತ, ಸಾಹಿತ್ಯದ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆ ಕುಮಾರೇಶ್ವರ ವಿರಕ್ತಮಠದ ಕುಮಾರೇಶ್ವರ ಬಯಲು ರಂಗಮಂದಿರದಲ್ಲಿ ನಡೆಯಲಿವೆ ಎಂದರು.
ಡಿ. 11ರಂದು ಆರಂಭವಾಗುವ ಪ್ರವಚನ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಬಮ್ಮನಹಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಪಟ್ಟಾಧ್ಯಕ್ಷರು ಪಾಲ್ಗೊಳ್ಳುವರು.
ಪುತ್ಥಳಿ ಅನಾವರಣ
ಡಿ. 22ರಂದು ನಡೆಯುವ ಪ್ರವಚನ ಮಂಗಳೋತ್ಸವ ಕಾರ್ಯಕ್ರಮದಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಪ್ರವಚನ ಪ್ರಭಾಕರ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು. ಡಿ. 23ರಂದು ನಡೆಯುವ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಸುತ್ತೂರಿನ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಸಿದ್ಧಲಿಂಗ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಪಾಲ್ಗೊಳ್ಳುವರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮಕ್ಕೆ ಸಚಿವೆ ಉಮಾಶ್ರೀ ಅವರನ್ನೂ ಆಹ್ವಾನಿಸಲಾಗಿದ್ದು, ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಿ.ಎಂ. ಉದಾಸಿ ತಿಳಿಸಿದರು.
ಕಲ್ಯಾಣಕುಮಾರ ಶೆಟ್ಟರ, ನಾಗಪ್ಪ ಸವಸತ್ತಿ, ಸಚಿನ ಕಬ್ಬೂರ, ವೀರೇಶ ಹೆಬ್ಬಳ್ಳಿ, ಸತೀಶ ಕಬ್ಬೂರ, ವೀರೇಶ ಹುಗ್ಗಿ, ರಾಜಶೇಖರ ಸಿಂಧೂರ, ಪ್ರಕಾಶ ಸಿಂಧೂರ ಇದ್ದರು.