ಕಳಪೆ ಬೀಜ: ರಾಣಿಬೆನ್ನೂರು ಬಂದ್
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ.18
ಅನ್ನದಾತನಿಗೆ ಕಳಪೆ ಗುಣಮಟ್ಟದ ಹತ್ತಿ ಬಿತ್ತನೆ ಬೀಜಗಳನ್ನು ನೀಡಿ ನಷ್ಟಕ್ಕೆ ಕಾರಣವಾಗಿರುವ ಮಹಿಕೋ ಕಂಪನಿಯಿಂದ ಎಕರೆಗೆ ತಲಾ ರು. 30 ಸಾವಿರ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿ ರೈತ ಸಂಘ ಸೋಮವಾರ ಕರೆ ನೀಡಿದ್ದ ರಾಣಿಬೆನ್ನೂರು ಬಂದ್ ಕರೆಗೆ ವ್ಯಾಪಾರಸ್ಥರು ಹಾಗೂ ಸಂಘಟನೆಗಳ ಮುಖಂಡರು ಸ್ಪಂದಿಸಿದ್ದರಿಂದ ನಗರ ಬಿಕೋ ಎನ್ನುತ್ತಿತ್ತು.
ನಗರದ ಕೆಇಬಿ ಗಣೇಶ ದೇವಸ್ಥಾನದ ಹತ್ತಿರ ಸೇರಿದ್ದ ಸಾವಿರಾರು ರೈತರು ಅಂಚೆ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಳಪೆ ಗುಣಮಟ್ಟದ ಹತ್ತಿ ಬಿತ್ತನೆ ಬೀಜಗಳನ್ನು ವಿತರಿಸಿರುವ ಮಹಿಕೋ ಕಂಪನಿ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ಕ್ರಮ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.
ತಳಿ ಸಂಶೋಧಿಸಿಲ್ಲ
ಅಂಚೆ ವೃತ್ತದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಷ್ಟ್ರದ ಅಭಿವೃದ್ಧಿ ಮತ್ತು ರೈತರ ಕಲ್ಯಾಣಕ್ಕಾಗಿ ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳು 20 ವರ್ಷಗಳಿಂದ ಹೊಸ ಬೀಜಗಳನ್ನು ಸಂಶೋಧಿಸಿಯೇ ಇಲ್ಲ. ಬಹುರಾಷ್ಟ್ರೀಯ ಮಾನ್ಸೆಂಟೋ ಕಂಪನಿಯ ಬೀಜಗಳನ್ನು ಬಳಸುವಂತೆ ಸಲಹೆ ನೀಡುತ್ತಿದ್ದಾರೆ. ಹೀಗಾಗಿ, ಉತ್ತರ ಕರ್ನಾಟಕದ ರೈತರು 10 ವರ್ಷಗಳಿಂದ ಅನಿವಾರ್ಯವಾಗಿ ಮಹಿಕೋ ಕಂಪನಿಯ ಹತ್ತಿ ಬಿತ್ತನೆ ಬೀಜಗಳನ್ನೇ ಬಳಸುತ್ತ ಹಾನಿಯನ್ನು ಅನುಭವಿಸುತ್ತಿದ್ದಾರೆ. ಧಾರವಾಡ ಕೃಷಿ ವಿಜ್ಞಾನ ಕಾಲೇಜಿನ ವಿಜ್ಞಾನಿಗಳೇ ಇದಕ್ಕೆ ಕಾರಣರೆಂದು ಆರೋಪಿಸಿದರು.
ಬಂಜೆಯಾದ ಗಿಡಗಳು
ದೇಶದ ರೈತರ ಬೀಜದ ಹಕ್ಕನ್ನು ಮಹಿಕೋ ಮಾನ್ಸೆಂಟೋ ಬಹುರಾಷ್ಟ್ರೀಯ ಬೀಜೋತ್ಪಾದನಾ ಕಂಪನಿ ಕಿತ್ತುಕೊಂಡಿರುವ ಕಾರಣ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಒಟ್ಟು 5.35 ಲಕ್ಷ ಎಕರೆ ಹೊಲಗಳಲ್ಲಿ ಆಳೆತ್ತರಕ್ಕೆ ಗಿಡಗಳು ಬೆಳೆದು ನಿಂತಿದ್ದರೂ ಹೂವು, ಕಾಯಿಗಳನ್ನು ಬಿಡದೆ ಬಂಜೆಯಾಗಿವೆ. ಮಹಿಕೋ ಮಾನ್ಸಾಂಟೋ ಕಂಪನಿಯ ಕನಕ, ನಿಕ್ಕಿ ಪ್ಲಸ್, ಬಿಮಾ, ನೀರಜ, ಚಿರಂಜೀವಿ ತಳಿಯ ಹತ್ತಿ ಬೆಳೆಗಳೇ ಇದಕ್ಕೆ ಸಾಕ್ಷಿ ಎಂದು ದೂರಿದರು.
ಪರಿಹಾರ ಕೊಡಿ
ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಮಾತನಾಡಿ, 1980ರಲ್ಲಿ ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಕೃಷಿ ವಿಜ್ಞಾನಿಯಾಗಿದ್ದ ಡಾ ಎಸ್.ಎ. ಪಾಟೀಲರು ಹತ್ತಿ ತಳಿಗಳನ್ನು ಅಭಿವೃದ್ಧಿಪಡಿಸಿ ಕಂಡು ಹಿಡಿದಿದ್ದ ಡಿಸಿಎಚ್ 92 ಬಿಟ್ಟರೆ ಬೇರಾರೂ ತಳಿ ಬಿಡುಗಡೆ ಮಾಡಿಲ್ಲ. ಮಹಿಕೋ ಕಂಪನಿಯ ಕನಕ ಮತ್ತು ನಿಕ್ಕಿ ಪ್ಲಸ್ ಹಾಗೂ ಇತರ ಕಂಪನಿಗಳ ಹತ್ತಿ ಬಿತ್ತಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಸಂಚಾಲಕ ರವಿಂದ್ರಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಣ್ಣ ಭಾರ್ಕಿ, ತಾಲೂಕು ಅಧ್ಯಕ್ಷ ಸುರೇಶಪ್ಪ ಗರಡಿಮನಿ, ಜಯಣ್ಣ ಮಾಗನೂರು, ಶಿವಪ್ಪ ಜಾನಪ್ಪನವರ, ಹರಿಹರಗೌಡ ಪಾಟೀಲ, ಶಿವಾನಂದ ಲಿಂಗದಹಳ್ಳಿ, ಪರ್ವತಗೌಡ ಪಾಟೀಲ, ಬಸವರಾಜ ಓಲೇಕಾರ, ತಮ್ಮಣ್ಣ ಮುದುಕಣ್ಣನವರ ಮಾತನಾಡಿದರು.
ರೈತರಿಂದ ಮನವಿ ಸ್ವಿಕರಿಸಿದ ಉಪ ವಿಭಾಗಾಧಿಕಾರಿ ಮಹ್ಮದ ಝಬೇರಾ ಹಾಗೂ ತಹಸೀಲ್ದಾರ ಹನುಮಂತಪ್ಪ ಬಡದಾಳ, ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ, ಮುಖ್ಯಮಂತ್ರಿ ಹಾಗೂ ಮಹಿಕೋ ಕಂಪನಿ ಅಧಿಕಾರಿಗಳ ಜತೆ ಮಾತನಾಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.