ಕೆಎಲ್‌ಇ ಸಂಸ್ಥಾಪಕರ ಸೇವೆ ಅನುಪಮ: ಗುರುದೇವಿ
ಹಾವೇರಿ: ಶೈಕ್ಷಣಿಕ ರಂಗದಲ್ಲಿ ವಿಶಿಷ್ಟ ಖ್ಯಾತಿ ಹೊಂದಿರುವ ಕೆಎಲ್‌ಇ ಸಂಸ್ಥೆ ಸದಾ ಸಮಾಜಮುಖಿಯಾಗಿ, ಶಿಕ್ಷಣ ವಂಚಿತವಾಗಿದ್ದ ಕಾಲಘಟ್ಟದಲ್ಲಿ ಹಲವಾರು ಹಿರಿಯ ಚೇತನಗಳ ಸಹಕಾರ ಮತ್ತು ಸಹಯೋಗದಲ್ಲಿ ಶಿಕ್ಷಣ ಕೇಂದ್ರ ಕಟ್ಟಿ ಅಕ್ಷರ ದಾಸೋಹ ನಡೆಸಿದ್ದನ್ನು ಮರೆಯಲಾಗದು ಎಂದು ಬೆಳಗಾವಿ ಕೆಎಲ್‌ಇ ಲಿಂಗರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಗುರುದೇವಿ ಹುಲ್ಲೆಪ್ಪನವರಮಠ ಹೇಳಿದರು.
ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಥೆಯ 98ನೇ ಸಂಸ್ಥಾಪನಾ ದಿನಾಚರಣೆ ಯಲ್ಲಿ ಅವರು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆಯುವಲ್ಲಿ ಸಾವಿರಾರು ಜನರ ಪರಿಶ್ರಮ ಮತ್ತು ಸಮಯ ಪ್ರಜ್ಞೆ ಇದ್ದು, ಈ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉನ್ನತ ಮಟ್ಟದ ಶಿಕ್ಷಣ ಕೊಡುತ್ತಿರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳು ಸಾಮಾಜಿಕವಾಗಿ ಉನ್ನತ ಸಾಧನೆ ಮಾಡುತ್ತಿರುವುದು ಸಂಸ್ಥೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದೆ. ತ್ಯಾಗ, ಪರಿಶ್ರಮ, ಅನವರತ ಸೇವೆ ಮತ್ತು ಸಾಮಾಜಿಕ ಕಾಳಜಿಯನ್ನು ಹೊಂದಿದ್ದ ಸಂಸ್ಥಾಪಕರು ತನು ಮನ ಧನ ಅರ್ಪಿಸಿ ಸಂಸ್ಥೆ ಕಟ್ಟಿದರೆಂದು ಶ್ಲಾಘಿಸಿದರು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಪಿ.ಡಿ. ಶಿರೂರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ ಬಿ.ಸಿ. ಬನ್ನೂರ ಸ್ವಾಗತಿಸಿದರು. ಡಾ ಸಿ. ಮಲ್ಲಣ್ಣ ಪರಿಚಯಿಸಿದರು. ಪಂಚಾಕ್ಷರಯ್ಯ ಮಠದ ನಿರೂಪಿಸಿದರು. ಬಿ.ಎಸ್. ಯಕ್ಕುಂಡಿ ವಂದಿಸಿದರು.