ದನ ಕುಡಿವ ನೀರೇ ವಿದ್ಯಾರ್ಥಿಗಳಿಗೂ!
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 18
ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಕೊಠಡಿ ಮುಂತಾದ ಸೌಲಭ್ಯಗಳಿಗಾಗಿ ಸರ್ಕಾರ ಸಾಕಷ್ಟು ವೆಚ್ಚ ಮಾಡುತ್ತಿದ್ದರೂ ತಾಲೂಕಿನ ತಿಮ್ಮಾಪುರ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ದನ ಕುಡಿಯುವ ನೀರೇ ಗತಿಯಾಗಿದೆ!
ದನಗಳು ಕುಡಿಯಲು ಬಳಸುವ ನೀರನ್ನೇ ತಿಮ್ಮಾಪುರ ಶಾಲೆ ವಿದ್ಯಾರ್ಥಿಗಳೂ ಉಪಯೋಗಿಸುತ್ತಿರುವುದನ್ನು ಗ್ರಾಮಕ್ಕೆ ಹೋದರೆ ನೀವೂ ಕಾಣಬಹುದು.
ಶಾಲೆ ಮುಂದೆ ಗ್ರಾಪಂನವರ ನಿರ್ಮಿಸಿದ ನೀರಿನ ತೊಟ್ಟಿಯಿದೆ. ಅದರಲ್ಲಿ ದನಗಳು ನೀರು ಕುಡಿದರೆ, ಗ್ರಾಮಸ್ಥರು ದನದ ಮೈ ತೊಳೆಯುವುದು, ಅರಿವೆ ಸೆಳೆಯುವುದು, ವಾಹನ ತೊಳೆಯುವುದನ್ನು ಮಾಡುತ್ತಾರೆ. ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡಿ, ಇಲ್ಲೇ ತಾಟು ತೊಳೆದು, ಇದೇ ನೀರನ್ನು ಕುಡಿಯುತ್ತಾರೆ.
2011-12ನೇ ಸಾಲಿನಲ್ಲಿ ಎನ್‌ಆರ್‌ಡಿಡಬ್ಲೂಪಿ ಯೋಜನೆಯಡಿ ಶಾಲಾ ಕುಡಿಯುವ ನೀರು ವಿತರಣೆಗಾಗಿ ರು. 1 ಲಕ್ಷ ಅನುದಾನದಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ನೀರಿನ ಟ್ಯಾಂಕ್, ನಲ್ಲಿಗಳು ವ್ಯವಸ್ಥೆ ಮಾಡಿದ್ದರೂ ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ಮಕ್ಕಳು ಕೊಳಕು ನೀರನ್ನೇ ಕುಡಿಯುವಂತಾಗಿದೆ.
ಮುಖ್ಯೋಪಾಧ್ಯಾಯ ಕೋಡಿವಾಳ ಪ್ರತಿಕ್ರಿಯಿಸಿ, ನೀರಿಗಾಗಿ ರು. 1 ಲಕ್ಷ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಪಂಪ್ ಅಳವಡಿಸಲಾಗಿದ್ದು, ವಿದ್ಯುತ್ ಸಂಪರ್ಕವಿದೆ. ನೀರನ್ನು ಶೇಖರಣೆ ಮಾಡಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಇದು ಹಾರಿಕೆ ಉತ್ತರ, ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದು ಹೊಸ ನಲ್ಲಿಗಳನ್ನು ನೋಡಿದರೆ ಗೊತ್ತಾಗುತ್ತದೆ.