ಶಹನಾಯಿ ಮಾಂತ್ರಿಕ ಭಜಂತ್ರಿ ಸಾಧನೆ ಹಿರಿದು: ಶ್ರೀ
ಹಾವೇರಿ: ಬಸವರಾಜ ಭಜಂತ್ರಿ ಸತತ ಸಾಧನೆಯ ಮೂಲಕ ದೇಶಾದ್ಯಂತ ಸಂಗೀತ ಕಾರ್ಯಕ್ರಮ ನೀಡಿ ಕರ್ನಾಟಕದ ಬಿಸ್ಮಿಲ್ಲಾ ಖಾನ್ ಎಂದು ಪ್ರಸಿದ್ಧಿಯಾಗಿದ್ದು, ಶಹನಾಯಿ ವಾದನದ ಮೂಲಕ ಸಂಗೀತದ ಉಛ್ರಾಯ ಹಂತ ತಲುಪಿದ್ದಾರೆ. ಅವರ ಪ್ರತಿಭೆಗೆ ರಾಜ್ಯೋತ್ಸವ ಪುರಸ್ಕಾರ ಸಂದಿದೆ ಎಂದು ಹೊಸಮಠದ ಬಸವ ಶಾಂತಲಿಂಗ ಶ್ರೀಗಳು ಹೇಳಿದರು.
ಭಾನುವಾರ ಸಂಜೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಹಾಗೂ ತಾಲೂಕು ಕೊರಮರ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಭಜಂತ್ರಿ ಅವರನ್ನು ಸನ್ಮಾನಿಸಿ ಶ್ರೀಗಳು ಮಾತನಾಡಿದರು.
ತಮ್ಮ ಸ್ವಂತ ಪರಿಶ್ರಮದ ಮೇಲೆ ಭಜಂತ್ರಿಯವರು ಸಾಧನೆ ಮಾಡಿದ್ದು, ರಾಜ್ಯವಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ ಸಂಗೀತ ಸುಧೆ ಹರಿಸಿ, ಖ್ಯಾತರಾಗಿದ್ದಾರೆ. ವಿದೇಶೀ ವಿದ್ಯಾರ್ಥಿಗಳೂ ಅವರ ಬಳಿ ಅಭ್ಯಾಸಕ್ಕೆ ಬಂದಿರುವುದು ಅವಲರ ಸಂಗೀತ ಸಾಧನೆಯ ಉತ್ತುಂಗವನ್ನು ಸೂಚಿಸುತ್ತದೆ. ಸಾಧನೆಗೆ ಜಾತಿ, ಮತ-ಪಂಥ ಎನ್ನುವುದಿಲ್ಲ. ಕೊರಮ ಸಮಾಜದವರು ಕೀಳರಿಮೆ ಮರೆತು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕು. ಭಜಂತ್ರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಜಿಲ್ಲೆಗೆ ಸಂದ ಗೌರವ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊರಮರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ಬಿಜಾಪುರ ಮಾತನಾಡಿ, ಬಸವರಾಜ ಭಜಂತ್ರಿಯವರು ನಮ್ಮ ಸಮಾಜಕ್ಕೆ ಹೆಮ್ಮೆ. ಸಮಾಜದಲ್ಲಿ ಅನೇಕ ವಿದ್ಯಾವಂತರು ಉನ್ನತ ಅಧಿಕಾರಿಗಳಿದ್ದು, ಅವರು ಸಮಾಜದ ಕೆಳಸ್ತರದಲ್ಲಿರುವ ಜನತೆಯನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಸಮಾಜ ಸಂಘಟನೆಗಾಗಿ ಡಿಸೆಂಬರ್ನಲ್ಲಿ ಹಾವೇರಿಯಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಇದರ ಯಶಸ್ಸಿಗೆ ಶ್ರಮಿಸಬೇಕು ಎಂದು ವಿನಂತಿಸಿದರು.
ಶಿಕ್ಷಣ ಇಲಾಖಾ ವಿಷಯ ಪರಿವೀಕ್ಷಕ ಎನ್.ಐ. ಇಚ್ಚಂಗಿ, ದಲಿತ ಮುಖಂಡ ಉಡಚಪ್ಪ ಮಾಳಗಿ, ಮುಖ್ಯ ಶಿಕ್ಷಕ ಎಚ್.ಎಚ್. ಕೊರವರ, ಸುರೇಶ ಕಲ್ಮನಿ, ಪುಟ್ಟೇಶ ಭಜಂತ್ರಿ, ಬದಸವರಾಜ ಕೊರಗರ, ಬಿ.ಟಿ. ಕೊರಗರ, ಸುರೇಶ ಬಾಸೂರು, ದುರಗಪ್ಪ ಇದ್ದರು.
ಪ್ರಾಸ್ತಾವಿಕವಾಗಿ ಕೃಷ್ಣಪ್ಪ ಭಜಂತ್ರಿ ಮಾತನಾಡಿದರು. ಬಿ.ಜಿ. ಕೊರಗರ ಸ್ವಾಗತಿಸಿ, ವಂದಿಸಿದರು.