ಶಿಡೇನೂರು: ಶಾಲಾಭಿವೃದ್ಧಿ ಸಮಿತಿಗೆ ಹೈಕೋರ್ಟ್ ತಡೆ
ಬ್ಯಾಡಗಿ: ಹೊಸ ಶಿಡೇನೂರು ಹಿಪ್ರಾ ಶಾಲೆಗೆ ರಚನೆಯಾಗಿದ್ದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ (ಎಸ್‌ಡಿಎಂಸಿ) ಸಮಿತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸೋಮವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪದಚ್ಯುತ ಅಧ್ಯಕ್ಷ ಬಸವರಾಜ ಗಡಿಗೋಳ, ಹೈಕೋರ್ಟ್ ಆದೇಶವನ್ನು ಸುದ್ದಿಗಾರರಿಗೆ ನೀಡಿದರು. ಪ್ರತಿ 3 ವರ್ಷಕ್ಕೊಮ್ಮೆ ಎಸ್‌ಡಿಎಂಸಿ ರಚನೆ ಮಾಡಬೇಕೆಂಬ ಸರ್ಕಾರದ ನಿಯಮವಿದ್ದರೂ ಮುಖ್ಯ ಶಿಕ್ಷಕ ಎಸ್.ಎಂ. ಸೋಮಸಾಗರ ಉಲ್ಲಂಘಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡು ಕೇವಲ 8 ತಿಂಗಳ ಹಿಂದೆ ರಚಿಸಿದ್ದ ಸಮಿತಿಯನ್ನು ಬದಲಿಸಿದ್ದಾರೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗಿದ್ದು, ನೂತನ ಸಮಿತಿಗೆ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದರು. ಕೆಲ ದಿನಗಳ ಹಿಂದೆ ಖಾಲಿ ಚೆಕ್‌ಗಳ ಮೇಲೆ ಸಹಿ ಮಾಡುವಂತೆ ಒತ್ತಡ ತಂದಿದ್ದರು. ಇದನ್ನು ನಿರಾಕರಿಸಿದ್ದನ್ನೇ ನೆಪವಾಗಿಟ್ಟುಕೊಂಡು ಪಾಲಕರ ಸಭೆಯನ್ನೂ ಕರೆಯದೆ ನನ್ನನ್ನು ಪದಚ್ಯುತಗೊಳಿಸಿರುವುದಾಗಿ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಧ್ಯ ಪ್ರವೇಶಿಸಿ ದುಂಡಾವರ್ತನೆ ತೋರಿದ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿಬೇಕು. ಇಲ್ಲದಿದ್ದಲ್ಲಿ ನ್ಯಾಯಾಲಯ ಆದೇಶದ ಉಲ್ಲಂಘನೆ ಮೊಕದ್ದಮೆ ದಾಖಲಿಸಲಾಗುವುದಾಗಿ ಎಚ್ಚರಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ತಿಮ್ಮಣ್ಣ ವಡ್ಡರ, ನಾಮನಿರ್ದೇಶಿತ ಸದಸ್ಯ ಶಿವಪ್ಪ ಮುನಿಗೋಳ, ಸದಸ್ಯರಾದ ಬಸವರಾಜ ದ್ಯಾವಣ್ಣನವರ, ಯಶೋಧರ ದೊಡ್ಡಗೌಡ್ರ ಇದ್ದರು.
ನಾಳೆ ಕನಕ ಜಯಂತಿ
ಬ್ಯಾಡಗಿ: ದಾಸಶ್ರೇಷ್ಠ ಕನಕದಾಸರ ಜಯಂತಿ ಸಮಾರಂಭ ತಾಲೂಕು ಆಡಳಿತದ ಆಶ್ರಯದಲ್ಲಿ ಸ್ಥಳೀಯ ಎಸ್‌ಜೆಜೆಎಂ ಸರ್ಕಾರಿ ಪದವಿಪೂರ್ವ ಕಾಲೇಜು ಆವಣದಲ್ಲಿ ನ. 20ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಲಿದ್ದು, ತಾಪಂ ಅಧ್ಯಕ್ಷೆ ಚಿನ್ನಮ್ಮ ಫಾಸಿ ಉದ್ಘಾಟಿಸಲಿದ್ದಾರೆ. ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ತಾಪಂ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಜಿಪಂ ಸದಸ್ಯರಾದ ಶಂಕ್ರಣ್ಣ ಮಾತನವರ, ವಿರೂಪಾಕ್ಷಪ್ಪ ಬಳ್ಳಾರಿ, ಗದಿಗೆಮ್ಮ ಬಸನಗೌಡ್ರ ಅತಿಥಿಗಳಾಗಿ ಆಗಮಿಸುವರು. ಬೆಳಗ್ಗೆ 9.30ಕ್ಕೆ ತಾಲೂಕು ಕಚೇರಿಯಿಂದ ಸಕಲ ವಾದ್ಯ ವೈಭವಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.