ಚತುಷ್ಪಥವೇ ಆಗಿಲ್ಲ, ಷಟ್ಪಥ ಎಂದು?
ಕನ್ನಡಪ್ರಭ ವಾರ್ತೆ, ಹಾವೇರಿ, ನ. 19
ರಾಷ್ಟ್ರೀಯ ಹೆದ್ದಾರಿ 4ನ್ನು ಷಟ್ಪಥ ಹೆದ್ದಾರಿಯನ್ನಾಗಿ ಪರಿವರ್ತಿಸುವ ಸಂಬಂಧವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಕರೆದಿದ್ದ ಸಭೆಯ ಬಗ್ಗೆ ಸಮರ್ಪಕ ಮಾಹಿತಿ ನೀಡದಿರುವ ಬಗ್ಗೆ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸದ ಶಿವಕುಮಾರ ಉದಾಸಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆ ಕರೆದಿತ್ತು. ಸಭೆಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಪಾಲ್ಗೊಂಡಿದ್ದರು. ಅಧಿಕಾರಿಗಳು ಸೂಕ್ತ ಮಾಹಿತಿ ನೀಡದೆ ಅಹವಾಲು ಸಭೆ ಕರೆದಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು. ಚಥುಷ್ಪಥ ಹೆದ್ದಾರಿ ಕಾಮಗಾರಿಯೇ ಸಮರ್ಪಕವಾಗಿ ಮಾಡದಿರುವ ಬಗ್ಗೆಯೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನತೆ ಕೆರಳಿಸಿದ ಮಾಹಿತಿ
ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ಅಧಿಕಾರಿ ಎಸ್.ಪಿ. ಸೋಮಶೇಖರ, ಷಟ್ಪಥ ನಿರ್ಮಾಣದ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ವ್ಯಾಪ್ತಿಯಲ್ಲಿ ರಾ.ಹೆ. 4ರ 59.3 ಕಿ.ಮೀ. ಉದ್ದದ ರಸ್ತೆಯನ್ನು 6 ಪಥವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 91.75 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಈಗಿರುವ ಪಾದಚಾರಿ ಸೇತುವೆ, ವಾಹನಗಳ ಸೇತುವೆ, ಚರಂಡಿ ವ್ಯವಸ್ಥೆ ಹಾಗೂ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಇದನ್ನು ಕೇಳಿ ಕೆರಳಿದ ಸಾರ್ವಜನಿಕರು, ಚತುಷ್ಪಥ ಅಭಿವೃದ್ಧಿಯನ್ನೇ ಸರಿಯಾಗಿ ಮಾಡಿಲ್ಲ. ಆಗ ನೀಡಿದ್ದ ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ಹರಿಹಾಯ್ದರು. ಪ್ರಾಧಿಕಾರದ ಅಧಿಕಾರಿ ಮಾತನಾಡಿ ಪ್ರಸ್ತಾವಿತ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲೇ ಈ ಹಿಂದೆ ಬಾಕಿ ಉಳಿದ ಕಾಮಗಾರಿಗಳನ್ನೂ ಪೂರ್ಣಗೊಳಿಸಲಾಗುವುದು ಎಂದರು. ಇದು ಜನರನ್ನು ಮತ್ತಷ್ಟು ಕೆರಳಿಸಿತು.
ಮಲ್ಲಯ್ಯ ಎಂಬವರು ಮಾತನಾಡಿ, ಮೂಟೆಬೆನ್ನೂರಿನಲ್ಲಿ ಹಿಂದಿನ ಕಾಮಗಾರಿಯನ್ನೇ ಮುಗಿಸಿಲ್ಲ. ಸಂಪರ್ಕ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಸಂಪೂರ್ಣ ಹಾಳಾಗಿದೆ. ಇದರಿಂದ ಬಸ್ ಬರುತ್ತಿಲ್ಲ. ಅನೇಕ ಬಾರಿ ಮನವಿ ನೀಡಿದರೂ ದುರಸ್ತಿ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಚಳಗೇರಿ ಮಂಜಣ್ಣ, ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಚಳಗೇರಿ ಬಳಿ ಸರ್ವೀಸ್ ರಸ್ತೆ ತೀವ್ರ ಹದಗೆಟ್ಟಿದೆ. ಬಸ್ ಬರುವುದು ಬಂದ್ ಆಗಿತ್ತು. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು, ಪ್ರತಿಭಟನೆ ಮಾಡಿದ ಬಳಿಕ ಬಸ್ ಸೇವೆ ಆರಂಭವಾಗಿದೆ. ಚರಂಡಿ ವ್ಯವಸ್ಥೆ ಮಾಡದ್ದರಿಂದ ಮಳೆ ನೀರು ಗದ್ದೆಗೆ ಹೋಗಿ ಸಂಗ್ರಹವಾಗುತ್ತಿದೆ. ನಾಲ್ಕು ತಿಂಗಳಿಂದ ಈ ಬಗ್ಗೆ ಹೇಳತ್ತಿದ್ದರೂ ನೀವೇಕೆ ಕ್ರಮ ಕೈಗೊಂಡಿಲ್ಲ? ಕಾಮಗಾರಿ ಮಾಡಿಸಲು ನಾವೇ ಊರಿನಲ್ಲಿ ಚಂದಾ ಎತ್ತಿ ನಿಮಗೆ ಹಣದ ವ್ಯವಸ್ಥೆ ಮಾಡಬೇಕೇ ಎಂದು ಪ್ರಶ್ನಿಸಿದರು.
ಸಂದಸ ಉದಾಸಿ ಎಚ್ಚರಿಕೆ
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಮೂಟೆಬೆನ್ನೂರಿನಲ್ಲಿ ಸಂಪರ್ಕ ರಸ್ತೆ ದುರಸ್ತಿ, ಬ್ಯಾಡಗಿಯಲ್ಲಿ ವಾಹನ ಕೆಳ ಸೇತುವೆ, ನೆಲೋಗಲ್, ಚಳಗೇರಿಯಲ್ಲಿ ಬಾಕಿ ಇರುವ ಕಾಮಗಾರಿ ಶೀಘ್ರದಲ್ಲಿ ಮುಗಿಸಬೇಕು. ಯಾವಾಗ ಪೂರ್ತಿಗೊಳಿಸುತ್ತೀರಿ ಎಂಬುದನ್ನು ತಿಳಿಸಬೇಕು ಎಂದು ತಾಕೀತು ಮಾಡಿದರು.
ಪ್ರಾಧಿಕಾರದ ಅಧಿಕಾರಿ ಸೋಮಶೇಖರ, ಡಿ. 15ರೊಳಗೆ ಕಾಮಗಾರಿ ಪೂರ್ತಿಗೊಳಿಸುವ ಭರವಸೆ ನೀಡಿದರು. ಉದಾಸಿ ಮಾತನಾಡಿ, ಬೇಕಿದ್ದರೆ ಇನ್ನೊಂದು ವಾರ ಹೆಚ್ಚಿನ ಕಾಲಾವಕಾಶ ಪಡೆಯಿರಿ. ಆದರೆ ಹೇಳಿದ ದಿನಾಂಕದೊಳಗೆ ಕಾಮಗಾರಿ ಮುಗಿಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ನಗರಸಭೆ ಅಧ್ಯಕ್ಷ ಐ.ಯು.ಪಠಾಣ ಇದ್ದರು.
ಡಿ. 3ಕ್ಕೆ ಮತ್ತೊಂದು ಸಭೆ
ಪ್ರಸ್ತಾವಿತ ಷಟ್ಪಥ ಹೆದ್ದಾರಿ ಬಗ್ಗೆ ಸಲಹೆ ಸೂಚನೆ ಪಡೆಯಲಾಯಿತು. ಆದರೆ ಸಭೆಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲದ್ದರಿಂದ ಡಿ. 3ರಂದು ಮತ್ತೊಂದು ಸಭೆ ಕರೆಯಲು ನಿರ್ಧರಿಸಲಾಯಿತು.