ಬಾಡದಲ್ಲಿಂದು ಭಕ್ತ ಕನಕದಾಸ ಜಯಂತಿ
ಶಿಗ್ಗಾಂವಿ: ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರೂ ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ, ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಹೀಗೆ ಅರ್ಥಗರ್ಭಿತ ನುಡಿಗಳು, ಮಂಥನ ಮಾಡುವ ಪದ ಸಮೂಹವನ್ನು ರಚಿಸಿ ಜನಮನದಲಿ ನೆಲೆಸಿದ ಮಹಾ ಹರಿದಾಸರೆಂದರೆ ಕನಕದಾಸರು.
ತಾಲೂಕಿನ ಬಾಡ ಗ್ರಾಮದಲ್ಲಿ ತಾಯಿ ಬಚ್ಚಮ್ಮ ತಂದೆ ಬೀರಪ್ಪ ಅವರ ಮಗನಾಗಿ ಹುಟ್ಟಿ ಕಾಗಿನೆಲೆಯಲ್ಲಿ ನೆಲೆಸಿ ನೂರಾರು ಕೀರ್ತನೆ ರಚಿಸಿ ಹಾಡಿದ್ದಾರೆ. ಅವರ ಮುಖ್ಯ ಕಾವ್ಯಗಳು ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾರ ಇಂತಹ ಇನ್ನು ಹಲವು ಕಾವ್ಯ ರಚಿಸಿದ ಮಹಾ ಹರಿದಾಸರು ಶಿಗ್ಗಾಂವಿ ತಾಲೂಕಿನಲ್ಲಿ ಜನಿಸಿದ್ದಾರೆ ಎಂದು ಎಷ್ಟೋ ಜನತೆಗೆ ತಿಳಿಯದ ಸಂಗತಿಯಾಗಿತ್ತು. ಆದರೆ, ಹಿಂದೆ ಬೊಮ್ಮಾಯಿ ಸಚಿವರಾದಾಗ ಒಂದು ಪುಟ್ಟ ಮಂದಿರದಲ್ಲಿ ಎಲೆಮರೆ ಕಾಯಿಯಂತಿದ್ದ ಕನಕದಾಸರ ವಿಗ್ರಹಕ್ಕೆ, ಬಾಡ ಗ್ರಾಮಕ್ಕೆ ಕಳೆ ಬಂದಿತು.
ದಾಸ ಸಾಹಿತ್ಯದ ಮಹತ್ವವೆಂದರೆ ಹಿಂದಿನ ಕಾಲದಿಂದ ಇಂದಿನ ಕಾಲದವರೆಗೂ ಅನ್ವಯಿಸುವ ತತ್ವ ಸಿದ್ಧಾಂತಗಳ ಆಗರ. ಅವರ ಸಾಹಿತ್ಯ ರಚನೆಯು, ಜಾನಪದ, ಸಂಗೀತ, ಸಾಹಿತ್ಯ ರಚನೆಕಾರರಿಗೆ ದಾರಿದೀಪಗಳು. ಅವರ ಜಾತ್ಯತೀತವಾದ ಸಮಾಜದ ರಚನೆಗೂ ಮಹತ್ವದ ಹೆಜ್ಜೆಗಳು. ಅವರು ಹೇಳಿದ ಮಾತುಗಳು ಅರ್ಥಗರ್ಭಿತವಾದವು. ಎಲ್ಲರೂ ಅರಿತು ಬಾಳಲೇಬೇಕು (ಕುಲಕುಲವೆಂದು ಬಡಿದಾಡದಿರಿ ಕುಲದ ನೆಲೆಯನೇನಾದರು ಬಲ್ಲಿರಾ) ನೀ ಮಾಯೆಯೋ ನಿನ್ನೊಳು ಮಾಯೆಯೋ, ತಲ್ಲಣಿಸದಿರು ಕಂಡ್ಯ ತಾಳುಮನವೆ, ಎಲ್ಲಾರು ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಇಂತಹ ಎಷ್ಟೋ ಪದಗಳು ಜನ ಮನದಲಿ ಅಚ್ಚಳಿಯದೆ, ಸರಸ್ವತಿದೇವಿಯ ಹೆಜ್ಜೆಗಳಾಗಿ ಉಳಿದಿವೆ.
ಮಂದಿರದ ಕೆಳಗೆ ಉತ್ಕನನ ನಡೆಸಿದಾಗ ಕನಕದಾಸರ ಅರಮನೆ, ಮಣ್ಣಿನ ಮಡಕೆಗಳು ನಾಣ್ಯಗಳು ದೊರೆತು ಬಾಡ ಗ್ರಾಮ ಎಲ್ಲರ ಗಮನ ಸೆಳೆಯಿತು. ಹಿಂದಿನ ಅವಧಿಯ ಸಚಿವರು ಈಗಿನ ಶಾಸಕ ಬಸವರಾಜ ಬೊಮ್ಮಾಯಿ ಶ್ರಮದಿಂದ ದೊಡ್ಡ ಪ್ರವಾಸಿ ತಾಣವಾಗಿ, ಇನ್ನು ದಾಸ ಸಾಹಿತ್ಯದ ರುಚಿಯನ್ನು ಅರಿಯದ ಜನರಿಗೆ ಬಾಡ ಗ್ರಾಮದ ಕನಕದಾಸರ ಕೋಟೆ ದಾಸ ಸಾಹಿತ್ಯವನ್ನು ಉಣಬಡಿಸಿದ ತಾಣವಾಗಿದೆ.
ನ. 20ರಂದು ಬಾಡ ಗ್ರಾಮದ ಕನಕದಾಸರ ಅರಮನೆಯಲ್ಲಿ ಬೆಳಗ್ಗೆ 9ಕ್ಕೆ ಪೂಜೆ ಹಾಗೂ ಅಭಿಷೇಕ ಜರುಗುವುದು. 10.30ಕ್ಕೆ ವೇದಿಕೆ ಜಯಂತ್ಯುತ್ಸವ ಜರುಗಲಿದೆ. ಕಾಗಿನೆಲೆ ಕ್ಷೇತ್ರದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಬಸವರಾಜ ಎಸ್. ಬೊಮ್ಮಾಯಿ ಉದ್ಘಾಟಿಸುವರು. ಸಚಿವರಾದ ಪ್ರಕಾಶ ಹುಕ್ಕೆರಿ, ಸಂಸದ ಪ್ರಹ್ಲಾದ್ ಜೋಶಿ, ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರೆಣ್ಣವರ ಪಾಲ್ಗೊಳ್ಳಲಿದ್ದಾರೆ.
ಬಸವರಾಜ ಹಿರೇಮಠ