ಮಹಾಪುರುಷರ ಆದರ್ಶ ಪಾಲಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 19
ಮಹಾಪುರುಷರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಅವರ ಹೆಸರಿನಲ್ಲಿ ಸಮಾಜವಿರೋಧಿ ಚಟುವಟಿಕೆಗೆ ಅವಕಾಶ ನೀಡುವುದು ಬೇಡ ಎಂದು ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ.ಪೀರಜಾದೆ ಹೇಳಿದರು.
ಕಾಲೇಜಿನಲ್ಲಿ ಪ್ರದೇಶ ಕುರುಬರ ಸಂಘದ ಹಾನಗಲ್ಲ ಘಟಕ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಂತ ಕವಿ ಕನಕದಾಸರ ಬದುಕು ಬರಹ ಕುರಿತಾದ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿದ ಅವರು, ಜಾತಿವಂತರಾಗಿ ಬಾಳಬೇಕು, ಜಾತಿವಾದಿಗಳಾಗುವುದು ಬೇಡ. ಮಹಾಪುರುಷರ ಹೆಸರಿನಲ್ಲಿ ವಿವಾದಗಳನ್ನು ಹುಟ್ಟುಹಾಕುವುದು ಸಲ್ಲದು ಎಂದರು.
ಸಾಹಿತಿ ಮಾರುತಿ ಶಿಡ್ಲಾಪುರ, ಸಂತ ಕವಿ ಕನಕದಾಸರು ಜಾತ್ಯತೀತ ಎಂಬುದಕ್ಕಿಂತ ಹೆಚ್ಚು ಸಮಾಜಮುಖಿ ಸಂತ. ಆದರ್ಶಗಳನ್ನು ಅನುಸರಿಸಿ ಸಮಾಜದ ಉನ್ನತಿಗೆ ಮಾರ್ಗದರ್ಶನ ಮಾಡಿದ ಕನ್ನಡ ನಾಡಿನ ಹೆಮ್ಮೆ. ಮಹಾಪುರುಷರ ದಿನಾಚರಣೆಗಳು ಕೇವಲ ಸಾಂಪ್ರದಾಯಿಕವಾಗಿರದೆ ಅವರನ್ನು ಅರ್ಥೈಸಿಕೊಳ್ಳುವ, ಅನುಸರಿಸುವ ಜಾಗೃತಿ ಕಾರ್ಯಕ್ರಮಗಳಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರದೇಶ ಕುರುಬರ ಸಂಘದ ಹಾನಗಲ್ಲ ತಾಲೂಕು ಅಧ್ಯಕ್ಷ ದಾನಪ್ಪ ಗಂಟೇರ, ಜಾತ್ಯತೀತವಾಗಿ ಸಮಾಜ ಕಟ್ಟಬೇಕು. ಕನಕದಾಸರನ್ನು ಕುರುಬ ಸಮಾಜಕ್ಕೆ ಸೀಮಿತಗೊಳಿಸದೆ ಇಡೀ ಮನುಕುಲವೇ ಪ್ರೀತಿಸಿವ ಮಹಾತ್ಮರೆಂಬುದನ್ನು ಅರಿಯಬೇಕು ಎಂದರು.
ಕುರುಬರ ಸಂಘದ ನಿರ್ದೇಶಕ ಮಾಲತೇಶ ಬ್ಯಾಗವಾದಿ, ಉಪಾಧ್ಯಕ್ಷ ಏಳುಕೋಟೆಪ್ಪ ಹಾವಳೇರ, ಮಹೇಶ ಪವಾಡಿ, ನಿಂಗಪ್ಪ ಕೋಣನಕೇರಿ, ಮಾಲತೇಶ ಆನವಟ್ಟಿ, ಬಸಪ್ಪ ಹೊಸಮನಿ, ಕುಮಾರ ಹೊಸಮನಿ, ಗಿರೀಶ ದೇಶಪಾಂಡೆ, ರವಿ ಲಕ್ಷ್ಮೇಶ್ವರ, ಎಂ.ಆರ್. ಹೆಗಡೆ, ನಿರಂಜನ ಗುಡಿ, ರವಿ ಜಡೆಗೊಂಡರ, ಪ್ರೇಮಾ ಇದ್ದರು. ಶಫಿಯಾಬಾನು ಶಿರಮಾಪುರ ಪ್ರಾರ್ಥಿಸಿದರು. ಎಸ್.ಬಿ. ಕಮಾಟಿ ಸ್ವಾಗತಿಸಿದರು. ಮಹೇಂದ್ರ ಬಾರಿಕರ ನಿರೂಪಿಸಿದರು. ನಿರಂಜನ ಗುಡಿ ವಂದಿಸಿದರು.
ಸ್ಪರ್ಧೆ ವಿಜೇತರು: ಪ್ರೌಢಶಾಲಾ ವಿಭಾಗದಲ್ಲಿ ಧನುಜಾ ಬಂಕಾಪುರ, ರೇಖಾ ದೊಡ್ಡಮನಿ, ಪ್ರಶಾಂತ ಜಿ.ಬಿ., ಕಾಲೇಜು ವಿಭಾಗದಲ್ಲಿ ಶ್ರುತಿ ಮಡಿವಾಳರ, ಸಾವಿತ್ರಿ ಜನಗೇರಿ, ಪುನೀತ ಕೋಟಿ ಮೊದಲ ಮೂರು ಬಹುಮಾನ ಪಡೆದರು. ವಿಜಯಕುಮಾರ ಚಿಕ್ಕಣ್ಣನವರ, ದೀಪಾ ಆನ್ವೇರಿ, ದಿವ್ಯಾ ತಳವಾರ, ಎಸ್.ಕೆ. ಚೇತನ ಸಮಾಧಾನಕರ ಬಹುಮಾನ ಗಳಿಸಿದರು.