ಸುದ್ದಿ ಸಂಕ್ಷೇಪ
ನಿರ್ಮಲಾಗೆ ಡಿಸೋಜಾ-ಎಚ್ಚೆಸ್ವಿ ಪ್ರಶಸ್ತಿ
ಹಾನಗಲ್ಲ: ದಕ್ಷಿಣ ಕನ್ನಡದ ನಿರ್ಮಲಾ ಸುರತ್ಕಲ್ ಅವರ 'ಪಾತರಗಿತ್ತಿ ಪಕ್ಕಾ' ಮಕ್ಕಳ ಕವನ ಸಂಕಲನಕ್ಕೆ 2012-13ನೇ ಸಾಲಿನ ಡಿಸೋಜ-ಎಚ್ಚೆಸ್ವಿ ಪುಟಾಣಿ ಸಾಹಿತ್ಯ ಪುರಸ್ಕಾರ ಲಭಿಸಿದೆ. ಹಾನಗಲ್ಲ ತಾಲೂಕು ಕನ್ನಡ ಯುವಜನ ಕ್ರಿಯಾ ಸಮಿತಿ ಈ ಸಲದಿಂದ ಹೆಸರಾಂತ ಸಾಹಿತಿಗಳು ಹಾಗೂ ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸೇವೆ ಮಾಡಿದ ನಾಡೋಜ ನಾ. ಡಿಸೋಜ ಹಾಗೂ ಎಚ್.ಎಸ್. ವೆಂಕಟೇಶಮೂರ್ತಿ ಅವರ ಹೆಸರಲ್ಲಿ ಡಿಸೋಜ-ಎಚ್ಚೆಸ್ವಿ ಪುಟಾಣಿ ಸಾಹಿತ್ಯ ಪುರಸ್ಕಾರವನ್ನು ನೀಡಲು ಆರಂಭಿಸಿದ್ದು, ಈ ಪ್ರಶಸ್ತಿಗೆ ಒಟ್ಟು 25 ಕೃತಿಗಳು ಪರಿಶೀಲನೆಗಾಗಿ ಬಂದಿದ್ದವು. ಮಕ್ಕಳ ಸಾಹಿತ್ಯದಲ್ಲಿ ವಿಶಿಷ್ಟ ಕೃಷಿ ಮಾಡುತ್ತಿರುವ ಮೈಸೂರು ಆಕಾಶವಾಣಿಯಲ್ಲಿರುವ ಸಾಹಿತಿ ಆನಂದ ಪಾಟೀಲರ ನೇತೃತ್ವದ ತೀರ್ಪುಗಾರರ ಸಮಿತಿ ನಿರ್ಮಲಾ ಸುರತ್ಕಲ್ ಅವರ ಕೃತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿತು. ಈ ಪುರಸ್ಕಾರ ರು. 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಫೆಬ್ರುವರಿ ತಿಂಗಳು ಹುಬ್ಬಳ್ಳಿಯಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ನೆರವೇರಲಿದೆ ಎಂದು ಸಮಿತಿಯ ಸಂಚಾಲಕರಾದ ವಿಜಯಕಾಂತ ಪಾಟೀಲ ಹಾಗೂ ಚನ್ನಪ್ಪ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
25ರಂದು ಶ್ವಾಸಕೋಶ ಕಾಯಿಲೆ ತಪಾಸಣೆ ಶಿಬಿರ
ಹಾವೇರಿ: ಸಿಓಪಿಡಿ ಸೇರಿದಂತೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ನ. 25ರಂದು ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು ಎಂದು ನಗರದ ಮಲ್ಲಾಡದ ರುದ್ರಮ್ಮ ಸ್ಮಾರಕ ಆಸ್ಪತ್ರೆಯ ಡಾ. ರವಿಕುಮಾರ ಮಲ್ಲಾಡದ ತಿಳಿಸಿದರು. ಪ್ರತಿ ವರ್ಷ ನ. 20ರಂದು ವಿಶ್ವ ಸಿಓಪಿಡಿ ದಿನ ಆಚರಿಸಲಾಗುತ್ತದೆ. ಆಸ್ಪತ್ರೆಯಲ್ಲೂ ಈ ಹಿನ್ನೆಲೆಯಲ್ಲಿ ನ. 25ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಈ ಕಾಯಿಲೆಗೆ ಸಂಬಂಧಿಸಿ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಡಾ. ಮಲ್ಲಾಡದ ತಿಳಿಸಿದರು. ಈ ಸಂದರ್ಭ ಗಿರೀಶ ಮಲ್ಲಾಡದ, ಆಶಾ ಮಲ್ಲಾಡದ, ಪ್ರಕಾಶ ನಾಲವಾಡಗಿ ಉಪಸ್ಥಿತರಿದ್ದರು.
ಹಾವೇರಿ: ಹನುಮಂತಬಂಡಿವಡ್ಡರಗೆ ಭಗವಾನ ಬುದ್ಧ ಫೆಲೋಶಿಪ್
ಹಾವೇರಿ: ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹನುಮಂತ ಎನ್. ಬಂಡಿವಡ್ಡರ ಅವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಭಗವಾನ್ ಬುದ್ಧ ನ್ಯಾಶನಲ್ ಫೆಲೋಶಿಪ್ ಅವಾರ್ಡ್ 2013ಗೆ ಆಯ್ಕೆ ಮಾಡಿದೆ. ಡಿ. 12 ಹಾಗೂ 13ರಂದು ದೆಹಲಿಯ ಟಾಗೋರ್ ಪಾರ್ಕ್ ಮಾಡೆಲ್ ಟೌನ್ಹಾಲ್ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು. ಬಂಡಿವಡ್ಡರ ಅವರ ಸಾಮಾಜಿಕ ಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಲಿತ ಮುಖಂಡರು ಅವರನ್ನು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬ್ಯಾಡಗಿ: ಡಿ. 2ರಂದು ದಾನಮ್ಮದೇವಿ ಜಾತ್ರೆ
ಬ್ಯಾಡಗಿ: ಇಲ್ಲಿನ ನೆಹರೂ ನಗರದಲ್ಲಿರುವ ದಾನಮ್ಮ ದೇವಿಯ ದ್ವಿತೀಯ ವರ್ಷದ ಜಾತ್ರಾ ಮಹೋತ್ಸವ ಡಿ. 2ರಂದು ನಡೆಯಲಿದೆ. ನ. 21ರಂದು ಬೆಳಗ್ಗೆ 10 ಗಂಟೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನೆಹರೂ ನಗರದ ದಾನೇಶ್ವರಿ ಸಮುದಾಯ ಭವನದಲ್ಲಿ ನಡೆಯಲಿದೆ. ನ. 28ರಂದು ಸಂಜೆ 5 ಗಂಟೆಗೆ 2001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವಿದೆ. ಗುಡ್ಡದ ಆನ್ವೇರಿ ಹಾಗೂ ಸೊರಟೂರು ವಿರಕ್ತ ಮಠದ ಶಿವಯೋಗಿಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಿ. 1ರಂದು ಗಣ ಹೋಮ, ರುದ್ರ ಹೋಮ, ಗಾಯತ್ರಿ ಹೋಮ ನಡೆಯಲಿದೆ. ಡಿ. 2ರ ಬೆಳಗ್ಗೆ 10.30ಕ್ಕೆ ದಾನಮ್ಮ ದೇವಿ ಪುರಾಣ ಮಂಗಲೋತ್ಸವ. ಬಾಳೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ವರ್ತಕರಾದ ಎಸ್.ಆರ್. ಪಾಟೀಲ, ಪಿ.ಕೆ. ನವಲೆ, ಬಾಬಣ್ಣ ಮೇಲಗಿರಿ, ಶಿವಲಿಂಗಪ್ಪ ಸಂಕಣ್ಣನವರ, ಮೃತ್ಯುಂಜಯ ಪಾಟೀಲ, ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ, ಅಕ್ಕನ ಬಳಗದ ಅಧ್ಯಕ್ಷೆ ಗುಲಾಬಮ್ಮ ಕಬ್ಬೂರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಂಧ್ಯಾರಾಣಿ ದೇಶಪಾಂಡೆ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಂಕಮ್ಮ ಸಂಕಣ್ಣನವರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ ಮುಖ್ಯ ಅತಿಥಿಗಳು. ಮಧ್ಯಾಹ್ನ 1 ಗಂಟೆಗೆ ಅನ್ನ ಪ್ರಸಾದವಿದೆ. ಸಂಜೆ 4 ಗಂಟೆಗೆ ದಾನಮ್ಮ ದೇವಿ ಪಲ್ಲಕ್ಕಿ ಸೇವೆ, 5 ಗಂಟೆಗೆ ರಥೋತ್ಸವ. 7 ಗಂಟೆಗೆ ಕಾರ್ತಿಕೋತ್ಸವ ನಡೆಯಲಿದ್ದು, ಭಕ್ತರು 2 ಸಾವಿರ ಪಣತಿ ಹಚ್ಚಲಿದ್ದಾರೆ. ರಾತ್ರಿ 8 ಗಂಟೆಗೆ ಆಕಾಶವಾಣಿ ಕಲಾವಿದೆ ಸುಜಾತಾ ಗುರವ್ ಅವರಿಂದ ಭಕ್ತಿಗೀತೆ, ಭಾವ ಗೀತೆ, ಸುಗಮ ಸಂಗೀತ ಹಾಗೂ ಹಳೆಯ ಕನ್ನಡ ಚಲನ ಚಿತ್ರಗೀತೆಗಳ ವಿಶೇಷ ಸಂಗೀತ ಕಾರ್ಯಕ್ರಮವಿದೆ ಎಂದು ದಾನೇಶ್ವರಿ ದೇವಿಯ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಅರಿವು ನೆರವು
ಹಾವೇರಿ: ಜವಾಹರ ನವೋದಯ ವಿದ್ಯಾಲಯ ಮಹಾರಾಜಪೇಟೆ, ಹಾನಗಲ್ಲ ವಕೀಲರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ನವೋದಯ ವಿದ್ಯಾಲಯದಲ್ಲಿ ಜರುಗಿತು. ಹಾನಗಲ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ರಾಮಚಂದ್ರ ಉದ್ಘಾಟಿಸಿದರು. ವಕೀಲರಾದ ಎಸ್.ಎಂ. ಕೋತಂಬರಿ, ಎಸ್.ಎಂ. ಹಾದಿಮನಿ ಉಪನ್ಯಾಸ ನೀಡಿದರು. ಸಿವಿಲ್ ನ್ಯಾಯಾಧೀಶ ಮದ್ವೇಶ ಢಬೇರ, ಹಾನಗಲ್ ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಇದ್ದರು. ಜವಾಹರ ನವೋದಯ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಸಿ.ಎಚ್. ದಿನೇಶನ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ, ಹಾನಗಲ್ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಸೂರ್ಯನಾರಾಯಣ ಇದ್ದರು. ಕನ್ನಡ ಅಧ್ಯಾಪಕ ಪಾಂಡುರಂಗಯ್ಯ ಜಿ. ನಿರೂಪಿಸಿದರು. ಯು.ಎಸ್. ಬಳ್ಳಾರಿ ವಂದಿಸಿದರು.
ನಾಳೆ ಮಾಜಿ ಸೈನಿಕರಿಂದ ಅಹವಾಲು ಸ್ವೀಕಾರ
ಹಾವೇರಿ: ಜಿಲ್ಲೆಯ ಮಾಜಿ ಸೈನಿಕರ ಹಾಗೂ ಮಾಜಿ ಸೈನಿಕರ ಅವಲಂಬಿತರ ಕುಂದುಕೊರತೆ ವಿಚಾರಿಸಲು ಮತ್ತು ಅಹವಾಲು ಸ್ವೀಕರಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಿಬ್ಬಂದಿ ನ.21ರಂದು ಗುರುವಾರ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡುವರು. ಅಂದು ಮಾಜಿ ಸೈನಿಕರು ಹಾಗೂ ಮಾಜಿ ಸೈನಿಕರ ಅವಲಂಬಿತರು ತಮ್ಮ ಮೂಲ ಸೇವಾ ದಾಖಲೆ ಮತ್ತು ಇಲಾಖೆಯಿಂದ ನೀಡಿದ ಗುರುತಿನ ಚೀಟಿಯೊಂದಿಗೆ ಭೇಟಿಯಾಗಬಹುದೆಂದು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
26ರಂದು ಹಾವೇರಿ ತಾಪಂ ಸಾಮಾನ್ಯ ಸಭೆ
ಹಾವೇರಿ: ಹಾವೇರಿ ತಾಪಂ ಸಾಮಾನ್ಯ ಸಭೆ ನ. 26ರಂದು ಬೆಳಗ್ಗೆ 11 ಗಂಟೆಗೆ ತಾಪಂ ಸಭಾಂಗಣದಲ್ಲಿ ಜರುಗಲಿದೆ. ತಾಪಂ ಅಧ್ಯಕ್ಷೆ ರೀಹಾನಾ ಚಾಂದಶೇಖಅಧ್ಯಕ್ಷತೆ ವಹಿಸಲಿದ್ದಾರೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ. ಜಯಕುಮಾರ ತಿಳಿಸಿದ್ದಾರೆ.
ಉಸ್ತುವಾರಿ ಸಚಿವರ ಪ್ರವಾಸ
ಹಾವೇರಿ: ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರು ನ.20ರಂದು ಬೆಳಗ್ಗೆ 10.30ಕ್ಕೆ ಯಕ್ಸಾಂಬದಿಂದ ಹೊರಟು, ಮಧ್ಯಾಹ್ನ 1.30ಕ್ಕೆ ಹಾವೇರಿಗೆ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜರುಗುವ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಹುಬ್ಬಳ್ಳಿಗೆ ತೆರಳುವರು.
ಮಸೀದಿ, ಮದರಸಾಕ್ಕೆ ರು. 12.85 ಲಕ್ಷ ಅನುದಾನ
ಹಾನಗಲ್ಲ: ರಾಜ್ಯ ವಕ್ಫ್ ಮಂಡಳಿಯಿಂದ ಹಾನಗಲ್ಲ ಪಟ್ಟಣ ಹಾಗೂ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಸೀದಿ ಕಟ್ಟಡ, ಮಸೀದಿ ಅಭಿವೃದ್ಧಿ ಹಾಗೂ ಮದರಸಾ ನಿರ್ಮಾಣಕ್ಕಾಗಿ ರು. 12.85 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮನೋಹರ ತಹಸೀಲ್ದಾರ್ ತಿಳಿದರು. ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ರು. 50 ಸಾವಿರ ವೆಚ್ಚದಲ್ಲಿ ಮಸೀದಿ ನಿರ್ಮಾಣ, ಬಾಳೂರು ಗ್ರಾಮದಲ್ಲಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ರು. 60 ಸಾವಿರ, ಮುಳಥಳ್ಳಿ ಗ್ರಾಮದಲ್ಲಿ ಮಸೀದಿ ಹಾಗೂ ಆವರಣ ನಿರ್ಮಾಣಕ್ಕೆ ರು. 1.50 ಲಕ್ಷ, ಹಾನಗಲ್ಲಿನ ಕಲ್ಲಹಕ್ಕಲ ಓಣಿಯಲ್ಲಿ ಮಸೀದಿ ನಿರ್ಮಾಣಕ್ಕೆ ರು. 1.50 ಲಕ್ಷ, ಹಾನಗಲ್ಲ ಹಳೇಕೋಟಿಯಲ್ಲಿ ದರ್ಗಾ ನಿರ್ಮಾಣಕ್ಕೆ ರು. 1.50 ಲಕ್ಷ, ಸಾಂವಸಗಿ ಗ್ರಾಮದಲ್ಲಿ ಮಸೀದಿ ಹಾಗೂ ಖಬರಸ್ಥಾನ ನಿರ್ಮಾಣಕ್ಕೆ ರು. 1.75 ಲಕ್ಷ, ಸೋಮಸಾಗರ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ ರು. 1 ಲಕ್ಷ, ಹಿರೇಬಾಸೂರ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ 1.50 ಲಕ್ಷ, ಶಿವಪುರ ಕಾಲನಿಯಲ್ಲಿ ಮಸೀದಿ ಹಾಗೂ ಮದರಸಾ ನಿರ್ಮಾಣಕ್ಕೆ ರು. 1.50 ಲಕ್ಷ, ಕಾಲ್ವೆ ಕಲ್ಲಾಪುರ ಗ್ರಾಮದಲ್ಲಿ ರು. 1.50 ಲಕ್ಷ ಸೇರಿ ಒಟ್ಟು 11 ಕಡೆಗ ಕಾಮಗಾರಿಕೈಗೊಳ್ಳಲಾಗಿದೆ ಎಂದರು. ತಾಪಂ ಅಧ್ಯಕ್ಷ ಮಲ್ಲನಗೌಡ್ರು ವೀರನಗೌಡ್ರು, ಜಿಪಂ ಸದಸ್ಯ ಮಹದೇವಪ್ಪ ಬಾಗಸರ, ರಂಗನಗೌಡ ಪಾಟೀಲ, ಜಿ.ಎಂ. ಮುಲ್ಲಾ, ಪ್ರಭಾಕರ ದೊಡ್ಡಕುರುಬರ, ದಾನಪ್ಪ ಗಂಟೇರ, ಟಾಕನಗೌಡ ಪಾಟೀಲ ಇದ್ದರು.
ಜಾಹೀರಾತು ನೀತಿ:ಪತ್ರಕರ್ತರ ಪ್ರತಿಭಟನೆ
ಹಾವೇರಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ 2013ನ ಜಾಹೀರಾತು ನೀತಿ ರದ್ದುಪಡಿಸಿ ಸೂಕ್ತ ಮಾರ್ಪಾಡಿನೊಂದಿಗೆ ಸ್ಥಳೀಯ ಪತ್ರಿಕೆಗಳಿಗೆ ಅನುಕೂಲವಾಗುವಂತೆ ಹೊಸ ಜಾಹೀರಾತು ನೀತಿ ಜಾರಿಗೆ ತರುವಂತೆ ಒತ್ತಾಯಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಮೂಲಕ ರಾಜ್ಯ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿತು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಜಾಹೀರಾತು ನೀತಿ ಅನೇಕ ನೂನ್ಯತೆಗಳಿಂದ ಕೂಡಿದ್ದು, ಸಣ್ಣ ಪತ್ರಿಕೆಗಳ ಏಳ್ಗೆಗೆ ಮಾರಕವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಜಾಹೀರಾತು ನೀತಿ 2013ನ್ನು ರದ್ದುಪಡಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಜ್ಯದ ಸಣ್ಣಪತ್ರಿಕೆ, ಜಿಲ್ಲಾ ಮಟ್ಟದ ಪತ್ರಿಕೆಗಳ ಮಾಲೀಕರು, ಸಂಪಾದಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಹೀರಾತು ನೀತಿ ಜಾರಿಗೆ ತರುವಂತೆ ಪತ್ರಕರ್ತರು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಚಾವಡಿ, ಪ್ರಧಾನ ಕಾರ್ಯದರ್ಶಿ ಪರುಷುರಾಮ ಅಗಡಿ, ರಾಷ್ಟ್ರೀಯ ಮಂಡಳಿ ಸದಸ್ಯ ವಿಜಯ ಹೂಗಾರ, ಸಂಪಾದಕ ಅಶೋಕ ಕಾಶೆಟ್ಟಿ, ಶಿವಾನಂದ ಗೊಂಬಿ, ಎಚ್.ಕೆ ನಟರಾಜ, ಮಾಲತೇಶ ಅಂಗೂರ, ನಾಗರಾಜ ಕುರವತ್ತಿ, ದೀಪಕ್ ಹೆಗಡೆ, ಬಿ.ಆರ್.ನಂದಿಹಳ್ಳಿ, ರಾಜೇಂದ್ರ ರಿತ್ತಿ, ಶಿವಲಿಂಗು ಮಹಾನಭಾವಿಮಠ, ಪರುಷುರಾಮ ಹಳ್ಳಳ್ಳಿ ಇದ್ದರು.