ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕನಕ ಭವನ, ಉಚಿತ ವಸತಿ ನಿಲಯಕ್ಕೆ ರು. 2 ಕೋಟಿ

Lingaraj Badiger
Updated On : 21 Nov 2013, 12:00 pm

ಹಾವೇರಿ: ನಗರದಲ್ಲಿ ಕನಕ ಸಮುದಾಯ ಭವನ ಹಾಗೂ ಉಚಿತ ವಸತಿ ನಿಲಯ ನಿರ್ಮಿಸಲು ರು. 2 ಕೋಟಿ ಅನುದಾನ ನೀಡುವುದಾಗಿ ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಘೋಷಿಸಿದರು.
ಜಿಲ್ಲಾಡಳಿತ, ಕನ್ನಡ-ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನಕ ಭವನ ನಿರ್ಮಾಣಕ್ಕೆ ಅಗತ್ಯವಿರುವ 18 ಗುಂಟೆ ಜಾಗವನ್ನು ಬಸವೇಶ್ವರ ನಗರದಲ್ಲಿ ಗುರುತಿಸಲಾಗಿದೆ. ಅಲ್ಲಿ ಉಚಿತ ವಸತಿ ನಿಲಯವನ್ನೂ ಪ್ರಾರಂಭಿಸಲಾಗುವುದು. ಕಾಮಗಾರಿ ಆರಂಭಿಸಲು ರು. 25 ಲಕ್ಷ ಬಿಡುಗಡೆ ಮಾಡಲಾಗುವುದು. ಮುಖ್ಯಮಂತ್ರಿ ಜತೆ ಚರ್ಚಿಸಿ ಹೆಚ್ಚಿನ ಅನುದಾನ ಒದಗಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ದೇವಸ್ಥಾನ ಜೀರ್ಣೋದ್ಧಾರ: ಜಿಲ್ಲೆಯಲ್ಲಿರುವ ಬೀರೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನ ಒದಗಿಸಲು ಬದ್ಧನಾಗಿದ್ದೇನೆ. ಕಾಗಿನೆಲೆ ಪೀಠ ಸ್ವಾಮೀಜಿಗಳು, ಶಾಸಕರು ಹಾಗೂ ಸಮಾಜ ಬಾಂಧವರು ಜಿಲ್ಲೆಯಲ್ಲಿರುವ ಬೀರೇಶ್ವರ ದೇವಸ್ಥಾನಗಳ ಪಟ್ಟಿ ನೀಡಿದರೆ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಸಚಿವ ಹುಕ್ಕೇರಿ ಹೇಳಿದರು.
ಜಿಲ್ಲೆಯ ಅಭಿವೃದ್ಧಿ: ಕಾಗಿನೆಲೆ ಹಾಗೂ ಬಾಡ ಅಭಿವೃದ್ಧಿಗಾಗಿ ಈಗಾಗಲೇ ಪ್ರಾಧಿಕಾರಕ್ಕೆ ರು. 46 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ರು. 38 ಕೋಟಿ ಖರ್ಚಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ರು. 70 ಲಕ್ಷ ಅನುದಾನ ನೀಡಲಾಗಿದೆ. ಕೇಂದ್ರ ಸರ್ಕಾರದ ಜವಾಹರಲಾಲ್ ನೆಹರು ನಗರ ಅಭಿವೃದ್ಧಿಗೆ ಸಂಸ್ಥೆಯಿಂದ ಹಾವೇರಿ ಹಾಗೂ ರಾಣಿಬೆನ್ನೂರು ನಗರದಲ್ಲಿ ಸಾರಿಗೆ ಬಸ್ ಖರೀದಿಸಲು ರು. 8 ಕೋಟಿ ಮಂಜೂರಾಗಿದೆ. ಇತರ ತಾಲೂಕು ಪ್ರದೇಶಗಳಿಗೂ ಬಸ್ ಸೌಲಭ್ಯ ಕಲ್ಪಿಸಲು ಅನುದಾನ ಒದಗಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು. ಕಾಗಿನೆಲೆ ಕ್ಷೇತ್ರವಿರುವ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದು ಸಂತಸ ತಂದಿದ್ದು, ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವುದಾಗಿ ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಶಾಸಕ ಮನೋಹರ ತಹಶೀಲ್ದಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಕಾಗಿನೆಲೆ ಹಾಗೂ ಬಾಡ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಬಾಡದಲ್ಲಿನ ಉದ್ಯಾನ ಅಭಿವೃದ್ಧಿಗೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಡಾ. ಲಿಂಗದಳ್ಳಿ ಹಾಲಪ್ಪ ಉಪನ್ಯಾಸ ನೀಡಿ, ಕನಕದಾಸರನ್ನು ಕೇವಲ ಕೀರ್ತನೆಕಾರ ಎಂದು ಬಿಂಬಿಸಲಾಗಿದೆ. ಆದರೆ ಅವರೊಬ್ಬ ಅಪ್ರತಿಮ ಕವಿ ಎಂಬುದನ್ನು ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚಿಟ್ಟಿದ್ದಾರೆ. ಕನಕದಾಸರು ಮೋಹನ ತರಂಗಿಣಿ ಸೇರಿದಂತೆ ನಾಲ್ಕು ಉತ್ಕೃಷ್ಟ ಕೃತಿಗಳನ್ನು ರಚಿಸಿದ್ದಾರೆ. ಶೋಷಣೆ, ಅಸಮಾನತೆ ವಿರುದ್ಧ ಅವರು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಸವರಾಜ ಶಿವಣ್ಣನವರ, ಡಾ. ಶೋಭಾ ನಿಸ್ಸೀಮಗೌಡ್ರ, ಐ.ಯು. ಪಠಾಣ, ಎಸ್.ಎಫ್.ಎನ್. ಗಾಡಿಗೌಡ್ರ, ಕುರುಬ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮುದಕಣ್ಣನವರ, ಕೊಟ್ರೇಶ ಬಸೆಗಣ್ಣನವರ ಇದ್ದರು.ಡಿಸಿ ಪಾಂಡುರಂಗ ನಾಯಕ ಸ್ವಾಗತಿಸಿದರು. ಜಗದೀಶ ಚೌಟಗಿ ನಿರೂಪಿಸಿದರು. ಇದಕ್ಕೂ ಮುನ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ. ಬಸವರಾಜ ಭಜಂತ್ರಿ ಅವರಿಂದ ಶಹನಾಯಿ ವಾದನ, ಶ್ರೀಪಾದ ಗಡ್ಡಿ ಅವರಿಂದ ಕನಕದಾಸರ ಗೀತೆಗಳ ಗಾಯನ ಪ್ರಸ್ತುತಪಡಿಸಿದರು.

ದಾಸ ಶ್ರೇಷ್ಠರ ಮಾರ್ಗದಲ್ಲಿ ಸಾಗಿ:ಕೋಳಿವಾಡ
ರಾಣಿಬೆನ್ನೂರು: ವಿಶ್ವ ಮಾನವರೆಂಬ ಖ್ಯಾತಿಗೆ ಪಾತ್ರವಾಗಿರುವ ಕನಕ ದಾಸರನ್ನು ಕುರುಬನೆಂದು, ವಾಲ್ಮೀಕಿಯನ್ನು ತಳವಾರನೆಂದು, ವೇಮನ ಅವರನ್ನು ರೆಡ್ಡಿ ಎಂದು, ವಚನಕಾರ ಬಸವೇಶ್ವರರನ್ನು ಲಿಂಗಾಯಿತರೆಂದು ಜಾತಿಗೆ ಮೀಸಲಿರಿಸುವುದರ ಬದಲು ಮನುಕುಲದ ಉದ್ಧಾರಕ್ಕಾಗಿ ಅವರು ಹಾಕಿಕೊಟ್ಟಿರುವ ಧರ್ಮ ಮಾರ್ಗದಲ್ಲಿ ನಡೆಯುವುದರೊಂದಿಗೆ ಜಾತ್ಯತೀತತೆ ಸಮಾಜ ನಿರ್ಮಾಣಕ್ಕೆ ಸರ್ವರೂ ಮುಂದಾಗಬೇಕೆಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ ಆಶ್ರಯದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಭಕ್ತ ಶ್ರೇಷ್ಠ ಕನಕದಾಸರ 526ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗಾಧರ ಕೊಡ್ಲಿಯವರ, ಎಸ್. ಬಿ. ಮಲ್ಲೂರು ಕನಕ ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಹೂವಕ್ಕ ನಾಗೋರ, ಉಪಾಧ್ಯಕ್ಷ ಗಣೇಶಪ್ಪ ಬಿಲ್ಲಾಳ, ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಜಿಪಂ ಸದಸ್ಯರಾದ ಸಂತೋಷ ಪಾಟೀಲ, ಮಂಜುನಾಥ ಓಲೇಕಾರ ಮಾತನಾಡಿದರು. ತಹಸೀಲ್ದಾರ್ ಹನುಮಂತಪ್ಪ ಬಡದಾಳೆ, ಬಿಇಒ ಕೆ. ಲಕ್ಷ್ಮಣ, ತಾಪಂ ಇಒ ಕೃಷ್ಣಮೂರ್ತಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement