ಸುದ್ದಿ ಸಂಕ್ಷೇಪ
ಹಾವೇರಿ: ಶಿವಮೊಗ್ಗ ಜಿಲ್ಲೆಯ ಬಿ.ಆರ್. ಪ್ರಾಜೆಕ್ಟ್ನಲ್ಲಿರುವ ಒಳನಾಡು ಮೀನುಗಾರಿಕಾ ತರಬೇತಿ ಕೇಂದ್ರದಲ್ಲಿ ಎರಡು ತಿಂಗಳ ಅವಧಿಯ ತರಬೇತಿಗಾಗಿ ಅರ್ಹ ಪುರುಷ ಅಭ್ಯರ್ಥಿಗಳಿಂದ ಡಿ.10ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಗೆ 40 ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿದ್ದು, ಅರ್ಜಿದಾರರು ಹಾವೇರಿ, ಗದಗ ಹಾಗೂ ಧಾರವಾಡ ಸೇರಿದಂತೆ ಒಳನಾಡು ಮೀನುಗಾರಿಕೆಗೆ ಅವಕಾಶವಿರುವ 17 ಜಿಲ್ಲೆಗಳ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರು. 1 ಸಾವಿರಗಳ ಶಿಷ್ಯವೇತನ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಮೀನುಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಸಾಗಣೆ, ಬಲೆ ಹೆಣೆಯುವುದು ಹಾಗೂ ದುರಸ್ತಿ ಮಾಡುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವುದು ಮತ್ತು ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಪಾಲನೆ ಕುರಿತು ತರಬೇತಿ ನೀಡಲಾಗುವುದು. ಆಸಕ್ತರು ಅರ್ಜಿ ನಮೂನೆ ಬೇಕಾದಲ್ಲಿ ಮುಂಗಡವಾಗಿ ಪತ್ರ ಬರೆದು ತಿಳಿಸಿ, ಖುದ್ದಾಗಿ ಹೋಗಿ ಅರ್ಜಿ ಪಡೆಯಬಹುದು. ಇಲ್ಲವೆ, ಜಿಲ್ಲಾ ಅಥವಾ ತಾಲೂಕು ಮಟ್ಟದ ಮೀನುಗಾರಿಕಾ ಕಚೇರಿಗಳಲ್ಲಿ ಅರ್ಜಿ ನಮೂನೆ ಹಾಗೂ ಮಾಹಿತಿ ಪಡೆಯಬಹುದು. ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1) ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ ಅವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ: 08282-256252 ಸಂಪರ್ಕಿಸಬಹುದು.
ವಿದ್ಯಾರ್ಥಿಗಳಿಗೆ ಶಿಷ್ಯವೇತನ
ಹಾವೇರಿ: ಮೂಲ ವಿಜ್ಞಾನದೆಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಅಕಾಡೆಮಿಯಿಂದ ನೀಡುತ್ತಿರುವ ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿ ಶಿಷ್ಯವೇತನ ಹಾಗೂ ನಂಜುಂಡಪ್ಪ ಸಮಿತಿಯು ಗುರುತಿಸಿರುವ ರಾಜ್ಯದ 114 ಹಿಂದುಳಿದ ತಾಲೂಕುಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಶಿಷ್ಯವೇತನ ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ನ. 30ರೊಳಗಾಗಿ ಅಕಾಡೆಮಿಗೆ ಕಳುಹಿಸಿಕೊಡಬೇಕೆಂದು ಇಲಾಖೆ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.