ಕಳಪೆ ಕಾಮಗಾರಿ: ಸರಿಪಡಿಸಿ, ಇಲ್ಲ ಕ್ರಮ ಎದುರಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 21
ಲೋಕೋಪಯೋಗಿ ಇಲಾಖೆ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಳೆದ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ. ಗುತ್ತಿಗೆದಾರರು, ಅಧಿಕಾರಿಗಳು ಇದನ್ನು ಸರಿಪಡಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಶಾಸಕ ಮನೋಹರ ತಹಶೀಲ್ದಾರ್ ಎಚ್ಚರಿಸಿದ್ದಾರೆ.
ಗುರುವಾರ ಹಾನಗಲ್ಲ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯ ವಿವರ ಪಡೆದು ಮಾತನಾಡಿದರು.
ಗುತ್ತಿಗೆದಾರರು, ಅಧಿಕಾರಿಗಳೇ ಹೊಣೆ: ಲೋಕೋಪಯೋಗಿ ಇಲಾಖೆಯಿಂದ ಇತ್ತೀಚಿಗಷ್ಟೇ ನಿರ್ಮಿಸಲಾಗಿರುವ ರಸ್ತೆಗಳು ಕಿತ್ತುಹೋಗಿವೆ. ಕಾಮಗಾರಿ ಕಳಪೆಯಾಗಿದ್ದು, ಇದನ್ನು ನಿರ್ವಹಿಸಿದ ಗುತ್ತಿಗೆದಾರರು ಹಾಗೂ ಇಲಾಖೆಯ ಅಧಿಕಾರಿಗಳೇ ಇದರ ಹೊಣೆ ಹೊರಬೇಕು. ಕೂಡಲೇ ನಿರ್ವಹಣಾ ನಿಯಮದಡಿ ಕಳಪೆಯಾದ ಕಾಮಗಾರಿ ಸರಿಪಡಿಸಬೇಕು. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಾಲೂಕಿನಲ್ಲಿ ನಿರ್ಮಾಣವಾದ ರಸ್ತೆಗಳು ಈಗಾಗಲೇ ಹಾಳಾಗಿ ಎಂದೋ ಮಾಡಿದ ರಸ್ತೆಗಳಂತೆ ಕಾಣುತ್ತಿವೆ. ಕೂಡಲೇ ಇಂಥ ರಸ್ತೆಗಳನ್ನು ಮರು ನಿರ್ಮಾಣ ಮಾಡಲೇಬೇಕು.
ಹಣ ನೀಡಬೇಡಿ: ಬೃಹತ್ ನೀರಾವರಿ ಇಲಾಖೆ 18 ಗ್ರಾಮಗಳಲ್ಲಿ ರು. 3.15 ಕೋಟಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಕಾಲನಿಗಳಲ್ಲಿ ಕೈಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ. ಈ ರಸ್ತೆ ನಿರ್ಮಿಸಿದ ಗುತ್ತಿಗೆದಾರರಿಗೆ ಹಣ ನೀಡಬಾರದು ಎಂದು ತಾಪಂ ಸದಸ್ಯರಾದ ಸುರೇಶ ನೆರ್ಕಿಮನಿ ಹಾಗೂ ಸುಭಾಸ ಓಲೇಕಾರ ಆಗ್ರಹಿಸಿದರು. ಇದಕ್ಕೆ ಶಾಸಕ ಮನೋಹರ ತಹಸೀಲ್ದಾರ ಸಮ್ಮತಿ ಸೂಚಿಸಿ, ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸೂಚಿಸಿದರು.
ಕಳಪೆ ಬೀಜದಿಂದಾಗಿ ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿ ರೈತ ಸಮುದಾಯ ಸಂಕಟಕ್ಕೊಳಗಾಗಿದೆ. ಕೃಷಿ ಇಲಾಖೆ ಈ ಬಗ್ಗೆ ಸಮೀಕ್ಷೆ ನಡೆಸಿ ನೊಂದ ರೈತರ ಪರವಾಗಿ ನಿಲ್ಲಬೇಕಾಗಿದೆ. ಬೆಳೆ ಹಾನಿಗೆ ಸಂಬಂಧಿಸಿದ ಸಮೀಕ್ಷೆಗಾಗಿ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ರೈತರಿಗಾದ ಹಾನಿ ತುಂಬಿ ಕೊಡಲು ಕಳಪೆ ಬೀಜ ನೀಡಿದ ಕಂಪನಿಗಳು, ಮಾರಾಟಗಾರರು ಜವಾಬ್ದಾರಿ ವಹಿಸಿಕೊಳ್ಳಬೇಕು. ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಈ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದು, 11 ವೈದ್ಯ ಹುದ್ದೆಗಳು ಖಾಲಿ ಇವೆ. ಈ ಆಸ್ಪತ್ರೆಯಲ್ಲಿ ಒಬ್ಬರೂ ಮಹಿಳಾ ವೈದ್ಯರಿಲ್ಲದಿರುವುದು ಸಭೆಯ ಗಮನ ಸೆಳೆಯಿತು.
ಹಾನಗಲ್ಲ ನಗರಕ್ಕೆ ಕುಡಿಯುವ ನೀರನ್ನೊದಗಿಸುವ ಆನಿಕೆರೆ ಅಭಿವೃದ್ಧಿ ಕಾಮಗಾರಿ ರು. 3.38 ಕೋಟಿಗಳಲ್ಲಿ ನಡೆಯಬೇಕಾಗಿದ್ದು, ಈಗಾಗಲೇ 2.84 ಕೋಟಿ ಮೌಲ್ಯದ ಕಾಮಗಾರಿ ಮುಗಿದಿದೆ ಎಂದು ಇಲಾಖೆ ದಾಖಲೆಗಳು ಹೇಳುತ್ತವೆ. ಆದರೆ, ಕಾಮಗಾರಿ ಮಾತ್ರ ಕಳಪೆಯಾಗಿದ್ದು, ಇದರ ಸಂಪೂರ್ಣ ತನಿಖೆಯಾಗುವ ವರೆಗೆ ಯಾವುದೇ ಹಣ ಬಿಡುಗಡೆ ಮಾಡಕೂಡದು ಎಂದು ಸೂಚಿಸಿದ ಮನೋಹರ ತಹಶೀಲ್ದಾರ, ಗುಣಮಟ್ಟದ ಕಾಮಗಾರಿಗೆ ಆದೇಶಿಸಿದರು.
ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರು, ಉಪಾಧ್ಯಕ್ಷೆ ಅನಿತಾ ಶಿವೂರ, ಜಿಪಂ ಸದಸ್ಯರಾದ ಪದ್ಮನಾಭ ಕುಂದಾಪುರ, ಮಹದೇವಪ್ಪ ಭಾಗಸರ, ಬಸವರಾಜ ಹಾದಿಮನಿ, ಕಸ್ತೂರೆವ್ವ ವಡ್ಡರ, ಅಭಿದಾಬಿ ನದಾಫ್, ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಸವರಾಜ ಇದ್ದರು.