ನೇಮಕಕ್ಕೆ ಆಗ್ರಹ: ಧರಣಿಗೆ ಕಾರ್ಮಿಕರ ನಿರ್ಧಾರ
ಹಾವೇರಿ: ಕೆಲಸಕ್ಕೆ ಸೇರಿಸಿಕೊಳ್ಳದಿರುವ ಸಂಗೂರು ಸಕ್ಕರೆ ಕಾರ್ಖಾನೆ ಮಾಲೀಕರ ವರ್ತನೆ ಖಂಡಿಸಿ ಹಾಗೂ ಕೂಡಲೇ ತಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಮೂವರು ಕಾರ್ಮಿಕರು ನ. 25ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಹಾಗೂ ಕಾರ್ಮಿಕರಾದ ಮಂಜುನಾಥ ಹೆಗ್ಗಣ್ಣವರ, ಲೋಹಿತ್ ಹೊಂಕಳದ, ಜಿ.ಟಿ. ಹಾವಣಗಿ ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ನಡೆಸುತ್ತೇವೆ. ಕಾರ್ಖಾನೆಯವರು ಕೆಲಸಕ್ಕೆ ತೆಗೆದುಕೊಳ್ಳುವವರೆಗೂ ಹೋರಾಟ ಮುಂದುವರಿಯುವುದು. ತಮ್ಮನ್ನು ಕಾರ್ಖಾನೆಯವರು ಕೆಲಸಕ್ಕೆ ತೆಗೆದುಕೊಳ್ಳದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟವನ್ನೂ ಮುಂದುವರಿಸಲಾಗುವುದು ಎಂದು ಕಾರ್ಮಿಕರು ತಿಳಿಸಿದರು.
1991ರಿಂದ ಕಾರ್ಮಿಕರಾಗಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದೇವೆ. ಕಾರ್ಮಿಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇವೆಂಬ ಒಂದೇ ಕಾರಣಕ್ಕಾಗಿ ಮೂವರನ್ನು ಶೋಷಿಸಲಾಗುತ್ತಿದೆ. ಯಾವುದೇ ಆಮಿಷಕ್ಕೆ ಬಲಿಯಾಗದೇ ದುಡಿಯಲು ಕೆಲಸ ಕೊಡಿ ಎಂದು ಪಟ್ಟು ಹಿಡಿದಿದ್ದೇವೆ. ಆದರೆ, ಅದಕ್ಕೆ ಮಾಲೀಕರು ಆಸ್ಪದ ಕೊಡುತ್ತಿಲ್ಲ. ಕೆಲಸಕ್ಕೆ ಸೇರಿಸಿಕೊಳ್ಳದಿರಲು ಲಿಖಿತವಾಗಿ ಕಾರಣವೂ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಮೂರು ವರ್ಷಗಳಿಂದ ತಮಗೆ ಕಾರ್ಖಾನೆಯಲ್ಲಿ ಕೆಲಸ ನೀಡಿಲ್ಲ. ಮೂರು ವರ್ಷಗಳಿಂದಲೂ ಮನವಿ ಮಾಡಿಕೊಳ್ಳುವುದು, ಪತ್ರ ಬರೆಯುವುದು, ಭೇಟಿಯಾಗಿ ಮನವಿ ಕೊಡುವುದು ಮಾಡುತ್ತಲೇ ಬಂದಿದ್ದೇವೆ. ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರಿಗೆ, ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ, ಸಚಿವರಿಗೆ ಎಲ್ಲರಿಗೂ ಮನವಿ ನೀಡಿ ಕಾರ್ಖಾನೆಯವರು ತಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ವಿನಂತಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಧರಣಿ ಸತ್ಯಾಗ್ರಹ ನಡೆಸುವ ಹಾದಿ ಹಿಡಿಯಬೇಕಾಗಿದೆ ಎಂದು ಕಾರ್ಮಿಕರು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಸಂಗೂರ ಸಕ್ಕರೆ ಕಾರ್ಖಾನೆಯ ಮಾಲೀಕ ವರ್ಗ ರಾಜಕೀಯ ಬಲ ಬಳಸಿಕೊಂಡು ಕಾರ್ಮಿಕರನ್ನು ನಿರಂತರವಾಗಿ ಶೋಷಣೆ ಮಾಡುತ್ತಲೇ ಬಂದಿದೆ. ಈ ಮೂವರು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೆಲವು ಕಾರ್ಮಿಕರಿಗೆ ಸ್ವಯಂನಿವೃತ್ತಿ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದರು.
ಕಾರ್ಖಾನೆ ಮಾಲೀಕರು ಒಂದೆಡೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು ಕಡಿತಗೊಳಿಸುವುದಾಗಿ ಹೇಳುತ್ತಿದೆ. ಇನ್ನೊಂದೆಡೆ ಸ್ಥಳೀಯ ಕಾರ್ಮಿಕರು ಮಾಡುವ ಕೆಲಸಕ್ಕೆ ಉತ್ತರಪ್ರದೇಶ, ಬಿಹಾರ ರಾಜ್ಯದ 70ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದೆ. 60 ವರ್ಷಕ್ಕೆ ವಯೋನಿವೃತ್ತಿ ಇದ್ದರೂ 58 ವರ್ಷಕ್ಕೇ ನಿವೃತ್ತಿ ಘೋಷಿಸುತ್ತಿದೆ ಎಂದು ದೂರಿದರು.
ಕಾರ್ಖಾನೆಯನ್ನು ಐದು ವರ್ಷಗಳ ಹಿಂದೆ ಜಿ.ಎಂ. ಶುಗರ್ಸ್ನವರು ಗುತ್ತಿಗೆ ಪಡೆದರು. ಆರಂಭದಲ್ಲಿಯೇ ಕಾರ್ಮಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಮುಂದಾಗಿದ್ದೆವು. ಆಗ ಮಾಲೀಕರು ಈಗ ಏನೂ ಬೇಡಿಕೆ ಇಡಬೇಡಿ. ಹೊಸದಾಗಿ ಕಾರ್ಖಾನೆ ಖರೀದಿಸಿದ್ದು, ನಂತರ ಎಲ್ಲ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಆ ಭರವಸೆಯಂತೆ ಕಾರ್ಮಿಕ ಸಂಘಟನೆ ಸುಮ್ಮನಿತ್ತು. ಈಗ ಐದು ವರ್ಷ ಆಗಿದ್ದು, ಕಾರ್ಖಾನೆ ಸಾಕಷ್ಟು ಸುಧಾರಣೆಯಾದರೂ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.