ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಭಾಷಾ ವೈವಿಧ್ಯದ ಸೌಹಾರ್ದ ದೇಶ ಭಾರತ

Lingaraj Badiger
Updated On : 22 Nov 2013, 11:52 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 21
ವೈವಿಧ್ಯವಾದ ಭಾಷೆ ವೇಷ ಭೂಷಣ ಹೊಂದಿದ ಭಾರತ ಜಗತ್ತಿನಲ್ಲಿಯೇ ವಿಶಿಷ್ಟವಾದುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಎಸ್. ಚಿನ್ನಿಕಟ್ಟಿ ನುಡಿದರು.
ಗುರುವಾರ ಹಾನಗಲ್ಲಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ ಭಾಷಾ ಸೌಹಾರ್ದತಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಮೇಲು ಕೀಳಿಗೆ ಅವಕಾಶವಿಲ್ಲದಂತೆ ಸಿರಿವಂತ-ಬಡವರನ್ನು ಸಮಾನಾಗಿ ಕಾಣುವ, ಸೌಹಾರ್ದದಿಂದ ಬದುಕುವ ಸಂದೇಶಗಳನ್ನು ನೀಡಿ ಐಕ್ಯ ಭಾರತದ ಕನಸನ್ನು ನನಸಾಗಿಸಲು ಶ್ರಮಿಸಿದವರು. ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಆಚರಣೆ ಮೂಲಕ ನಮ್ಮೊಳಗಿನ ಭಿನ್ನತೆಗಳಿಗೆ ತೆರೆ ಹಾಡಿ ಸೌಹಾರ್ದ ಭಾರತದ ಕನಸನ್ನು ಮಾದರಿಯಾಗಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಉದಯ ನಾಸಿಕ, ನಮ್ಮ ದೇಶದ ಸಂಸ್ಕೃತಿಯೇ ಸೌಹಾರ್ದಕ್ಕೆ ಹೆಸರಾದುದು. ಅದರಲ್ಲೂ ಕನ್ನಡಿಗರೂ ಇಡೀ ದೇಶದಲ್ಲಿಯೇ ಸೌಹಾರ್ದಕ್ಕೆ ಹೆಸರಾದವರು. ಕರ್ನಾಟಕದಲ್ಲಿರುವಷ್ಟು ಭಾಷೆಗಳು ಭಾರತದ ಯಾವ ರಾಜ್ಯದಲ್ಲಿಯೂ ಇಲ್ಲ. ಕನ್ನಡಿಗರ ಸಕಾರಾತ್ಮಕ ಚಿಂತನೆಗೆ ಅನ್ಯ ಭಾಷಿಗರ ನಕಾರಾತ್ಮಕ ನಡವಳಿಕೆ ಸಲ್ಲದು. ರಾಜಕೀಯ ಸಾಧನೆಗಾಗಿ ಭಾಷೆ, ಭಾಷೆಯಲ್ಲಿ ವಿಷ ಬೀಜ ಬಿತ್ತುವುದು ಸರಿಯಲ್ಲ ಎಂದರು.
ಮುಖ್ಯ ಅತಿಥಿ ವಿಜಯಕಾಂತ ಪಾಟೀಲ ಮಾತನಾಡಿ, ಕನ್ನಡದ ಪರಿಶುದ್ಧತೆಯೊಂದಿಗೆ ಅನ್ಯ ಭಾಷೆ ಕಲಿಯಲು ತೊಡಕಿಲ್ಲ. ಆದರೆ, ನಮ್ಮ ಭಾಷೆ ಮೇಲೆ ಪ್ರೀತಿ ಇರಲಿ, ಪರಭಾಷೆಯ ದ್ವೇಷ ಬೇಡ. ಭಾಷೆಯ ವಿಷಯದಲ್ಲಿ ಮುಕ್ತತೆ ಬೇಕು. ಅದಕ್ಕಾಗಿ ಹೋರಾಟ, ಗೊಂದಲ ಬೇಕಾಗಿಲ್ಲ. ಭಾಷೆ ಜಾತಿಯ ಹೆಸರಿನಲ್ಲಿ ವ್ಯಾಜ್ಯಗಳಾಗಿ ನೆಮ್ಮದಿ ಕದಡುವುದು ಬೇಡ ಎನ್ನುತ್ತ ತಮ್ಮ ಕನ್ನಡ ಪರ ಕವನ ಓದಿ ಹರ್ಷವ್ಯಕ್ತಪಡಿಸಿದರು.
ಪ್ರಾಚಾರ್ಯ ಎಸ್.ಸಿ. ಪೀರಜಾದೆ ಮಾತನಾಡಿದರು. ಶಫಿಯಾಬಾನು ಶಿರಮಾಪುರ ಪ್ರಾರ್ಥಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಮಹೇಂದ್ರ ಬಾರಿಕರ ಸ್ವಾಗತಿಸಿದರು. ಸಾಹಿತಿ ಮಾರುತಿ ಶಿಡ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಎಸ್.ಬಿ. ಕಮಾಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement