ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಎಟಿಎಂ ಬಳಕೆಗೆ ಸಾರ್ವಜನಿಕರ ಹಿಂಜರಿಕೆ

Mainashree
Updated On : 23 Nov 2013, 11:07 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 22
ಪಟ್ಟಣದ ವಿವಿಧ ಬ್ಯಾಂಕುಗಳಲ್ಲಿ 5 ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದರೂ ಅದರಲ್ಲಿ 4ಕ್ಕೆ ಸೆಕ್ಯೂರಿಟಿ ಗಾರ್ಡ್‌ಗಳಿಲ್ಲ. ಬೆಂಗಳೂರಿನ ಎಟಿಎಂನಲ್ಲಿ ಮಹಿಳೆಯೊಬ್ಬಳ ಮೇಲೆ ಬರ್ಬರ ಹಲ್ಲೆ ಘಟನೆಯಿಂದ ಜರ್ಜರಿತರಾಗಿರುವ ಸಾರ್ವಜನಿಕರು ಸೆಕ್ಯೂರಿಟಿ ಗಾರ್ಡ್‌ಗಳಿಲ್ಲದಿರುವ ಇಲ್ಲಿನ ಎಟಿಎಂಗಳಿಗೆ ರಾತ್ರಿ ಸಮಯದಲ್ಲಿ ಪ್ರವೇಶಿಸಲು ಹಿಂಜರಿಯುತ್ತಿದ್ದಾರೆ.
ಗಾರ್ಡ್‌ಗಳಿಲ್ಲ: ಎಸ್‌ಬಿಐ, ಎಸ್‌ಬಿಎಂ, ಐಎನ್‌ಜಿ ವೈಶ್ಯ, ಸಿಂಡಿಕೇಟ್, ಕಾರ್ಪೊರೇಶನ್, ಯೂನಿಯನ್ ಸೇರಿದಂತೆ 6 ರಾಷ್ಟ್ರೀಕೃತ ಬ್ಯಾಂಕುಗಳಿದ್ದು, ಇವುಗಳಲ್ಲಿ ಎಸ್‌ಬಿಐ, ಎಸ್‌ಬಿಎಂ, ಕಾರ್ಪೊರೇಶನ್ ಹಾಗೂ ಯೂನಿಯನ್ ಬ್ಯಾಂಕ್ ಎಟಿಎಂಗಳನ್ನು ಹೊಂದಿವೆ. ಎಕ್ಸಿಸ್ ಬ್ಯಾಂಕ್ ಶಾಖೆ ಪ್ರಾರಂಭಿಸದಿದ್ದರೂ ಎಟಿಎಂವೊಂದು ಕಾರ್ಯ ನಿರ್ವಹಿಸುತ್ತಿದೆ. ಆದರೆ, ಎಸ್‌ಬಿಐ ಒಂದನ್ನು ಹೊರತುಪಡಿಸಿ ಇನ್ನಾವುದೇ ಎಟಿಎಂಗಳಿಗೆ ಸೆಕ್ಯೂರಿಟಿ ಗಾರ್ಡ್‌ಗಳಿಲ್ಲ.
ಎಚ್ಚೆತ್ತುಕೊಂಡಿಲ್ಲ: ಸುಮಾರು ಎಂಟರಿಂದ ಹತ್ತರಷ್ಟಿದ್ದ ಕಳ್ಳರ ಗುಂಪೊಂದು ಹಣಕ್ಕಾಗಿ ಕಳೆದ 2010 ರ ಏ. 18ರಂದು ಬೆಳಗಿನ ಜಾವ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಎಟಿಎಂನಲ್ಲಿ ಮಾನಿಟರ್‌ನ್ನು ಕಲ್ಲಿನಿಂದ ಒಡೆದು ಹಾಕಿದ್ದರು. ಘಟನೆಯಿಂದ ಎಚ್ಚೆತ್ತುಕೊಳ್ಳದ ಬ್ಯಾಂಕರ್‌ಗಳು ರಕ್ಷಣಾ ಕ್ರಮಗಳನ್ನು ಜರುಗಿಸಿಲ್ಲ.
ಎಟಿಎಂಗೆ ಖಾತೆದಾರರಿಂದ ಹಣ: ಎಟಿಎಂ ಪದ್ಧತಿ ಪ್ರಾರಂಭಿಸುವ ಮೂಲಕ ದಿನದ 24 ಗಂಟೆ ಹಣ ಪಡೆಯುವುದು ಸೇರಿದಂತೆ ಶಾಪಿಂಗ್, ಬಸ್, ರೇಲ್ವೆ, ವಿಮಾನ ಮುಂಗಡ ಬುಕ್ಕಿಂಗ್ ಇನ್ನಿತರ ಅನುಕೂಲತೆ ಲಭಿಸಿರಬಹುದು. ಆದರೆ, ಗ್ರಾಹಕರಿಗೆ ಮಾತ್ರ ಸೂಕ್ತ ರಕ್ಷಣೆ ಇಲ್ಲದಿರುವುದು ದುರದೃಷ್ಟಕರ. ಎಟಿಎಂ ನಿರ್ವಹಣೆಗಾಗಿಯೇ ಗ್ರಾಹಕರ ಖಾತೆಯಿಂದ ವರ್ಷಕ್ಕೆ ರು. 102ರಿಂದ 112 ವಸೂಲಿ ಮಾಡುವ ಬ್ಯಾಂಕರ್‌ಗಳು ಸೆಕ್ಯೂರಿಟಿ ಗಾರ್ಡ್ ನೇಮಿಸಲು ಮಿನಮೇಷ ಮಾಡುತ್ತಿರುವುದೇಕೆ? ಇದು ಸಾರ್ವಜನಿಕರ ಪ್ರಶ್ನೆ.
ಅನ್‌ಲೋಡೆಡ್ ಗನ್‌ಸೆಕ್ಯೂರಿಟಿ ಗಾರ್ಡ್‌ಗಳಲ್ಲಿ ಖಾಸಗಿ ಏಜನ್ಸಿಯಿಂದ ನೇಮಕವಾದವರೇ ಹೆಚ್ಚು, ಅಲ್ಲದೇ ಗನ್‌ಗಳನ್ನು ಬಳಸುವ ಕುರಿತು ಅಧಿಕೃತ ತರಬೇತಿ ಪಡೆದಿರುವವರು ವಿರಳ. ಅಷ್ಟಕ್ಕೂ ಇವರು ಬಳಕೆ ಮಾಡುವ ಗನ್‌ಗಳು ಅನ್‌ಲೋಡೆಡ್ ಆಗಿದ್ದು, ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ಇಂತಹವರಿಂದ ಅಸಾಧ್ಯದ ಮಾತು.
ಏಜೆನ್ಸಿಯವರನ್ನೇ ಕೇಳಬೇಕು: ಈ ಕುರಿತು ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ, ಸೆಕ್ಯೂರಿಟಿ ಗಾರ್ಡ್ ನೇಮಕ ಸೇರಿದಂತೆ ಅವುಗಳಿಗೆ ಹಣ ಹಾಕುವುದು, ತೆಗೆಯುವುದು ಇನ್ನಿತರ ಎಲ್ಲ ನಿರ್ವಹಣೆಗಳನ್ನು ಏಜೆನ್ಸಿಗಳಿಗೆ ವಹಿಸಲಾಗಿದೆ. ನಮಗೆ ಸಂಬಂಧಿಸಿದ್ದಲ್ಲ. ಈ ಕುರಿತು ಅವರನ್ನೇ ಕೇಳಬೇಕು ಎಂಬ ಉತ್ತರ ಹೇಳುತ್ತಾರೆ.
ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಪಟ್ಟಣವು ವಾಣಿಜ್ಯ ನಗರಿಯಾಗಿದ್ದು, ವ್ಯಾಪಾರದ ಉದ್ದೇಶಕ್ಕಾಗಿ ಪರಸ್ಥಳದಿಂದ ಸಾವಿರಾರು ಜನರು ನಿತ್ಯ ಬ್ಯಾಡಗಿ ಪಟ್ಟಣಕ್ಕೆ ಬರುತ್ತಾರೆ. ರಾತ್ರಿ ಹಗಲೆನ್ನದೇ ಹಣಕ್ಕಾಗಿ ಜನರು ಎಟಿಎಂಗಳಿಗೆ ತೆರಳುವುದು ಸಹಜ. ಇಲ್ಲಿರುವ ಎಟಿಎಂಗಳು ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement