ಗಾಂಧೀಜಿ ಕನಸು ನನಸಾಗಿಸಿ: ಹೊಂಬರಡಿ
ರಾಣಿಬೆನ್ನೂರು: ರಾಷ್ಟ್ರಪಿತಾ ಮಹಾತ್ಮ ಗಾಂಧಿ ದೇಶವನ್ನು ಸ್ವತಂತ್ರಗೊಳಿಸಲು ನಡೆಸಿದ ಜನಾಂದೋಲನಕ್ಕೆ ದೇಶದ ಸಮಸ್ತ ಜನತೆ ಸಹಕರಿಸಿದ್ದ ಕಾರಣ ಭಾರತವಿಂದು ಸ್ವಾತಂತ್ರ್ಯಗೊಂಡಿದೆ. ಸ್ವಾತಂತ್ರ್ಯ ನಂತರ ದೇಶಕ್ಕೆ ತಗುಲಿದ ಬಹುಸಂಖ್ಯಾತ ಅನಕ್ಷರತೆಯನ್ನು ಹೊಡೆದೂಡಿಸಲು ಗಾಂಧೀಜಿ ಕಂಡ ಕನಸನ್ನು ನನಸಾಗಿಸಲು ಸರ್ವರೂ ಸಹಕರಿಸಬೇಕು ಎಂದು ತಾಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕ ಆರ್.ಡಿ. ಹೊಂಬರಡಿ ಹೇಳಿದರು.
ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಜನ ಶಿಕ್ಷಣ ಸಂಸ್ಥೆ ಹಾವೇರಿ, ತಾಲೂಕು ಲೋಕ ಶಿಕ್ಷಣ ಸಮಿತಿ ರಾಣಿಬೆನ್ನೂರು, ಗ್ರಾಪಂ ಲೋಕ ಶಿಕ್ಷಣ ಸಮಿತಿ ಕೋಡಿಯಾಲ ಹೊಸಪೇಟೆ ಆಶ್ರಯದಲ್ಲಿ ಕೋಡಿಯಾಲಹೊಸಪೇಟೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಂದ ಆಯ್ದ 20 ಜನ ನವ ಸಾಕ್ಷರರಿಗೆ 90 ದಿನಗಳ ಕಾಲ ನಡೆಯುವ ಸಾಮರ್ಥ್ಯಾಭಿವೃದ್ಧಿ, ವೃತ್ತಿ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಭಾರತ ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬಹುಸಂಖ್ಯಾತ ಅನಕ್ಷರತೆಯನ್ನು ಹೊಡೆದೊಡಿಸಲು ರಾಷ್ಟ್ರಪಿತ ಮಹಾತ್ಮಾಗಾಂಧಿ ಪಣತೊಟ್ಟ ಕಾರಣ ಭಾರತ ಸಾಕ್ಷರತಾ ಮಿಷನ್ ಪ್ರಾಧಿಕಾರ ದೇಶದ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು ಸಾಕ್ಷರ ಭಾರತ್ ಯೋಜನೆ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕರ್ನಾಟಕ ಸಾಕ್ಷರತಾ ಮಿಷನ್ ಪ್ರಾಧಿಕಾರ ರಾಜ್ಯದಲ್ಲಿ ಸಾಕ್ಷರ ಭಾರತ ಕಾರ್ಯಕ್ರಮ ಯಶಸ್ವಿಗಾಗಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದವರೆಗೆ ವಿವಿಧ ಸಮಿತಿಗಳನ್ನು ರಚಿಸಿದೆ. ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಹಾಗೂ ಸ್ವಯಂ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿಸಲು ಇದರಿಂದ ಸಾಧ್ಯವಾಗಿದೆ ಎಂದರು.
ಕೋಡಿಯಾಲಹೊಸಪೇಟೆಯ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಪ್ರಧಾನಗುರು ಆರ್.ಜಿ. ಚೌಹಾಣ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನ ಶಿಕ್ಷಣ ಸಂಸ್ಥೆಯ ಪಾಟೀಲ, ತಾಲೂಕು ಗ್ರಾಪಂ ಸಂಯೋಜಕರ ಮುಖಂಡ ಚನ್ನಗೌಡ ವೀರಬಸಪ್ಪನವರ, ಮಹಿಳಾ ಸಂಯೋಜಕಿ ಎಸ್.ಜಿ. ಕವಿತಾ, ಶಿಕ್ಷಕಿ ಜಿ.ಜಿ. ಗುಡ್ಡದ, ಪ್ರೇರಕಿ ಯಶೋಧಾ ಹಾಗೂ ಆಂಜನೆಯ ಚನ್ನಾಪುರ ಇದ್ದರು.