ಪೊಲೀಸರ ವಿಳಂಬ: ರಸ್ತೆ ತಡೆ
ಹಾವೇರಿ: ವ್ಯಕ್ತಿಯೋರ್ವ ಬಾವಿಯಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿ ಒಂದು ದಿನವಾದರೂ ಪೊಲೀಸರು ಬಾವಿಯಲ್ಲಿ ಬಿದ್ದಿರುವ ಶವ ತೆಗೆಯದಿರುವುದನ್ನು ಖಂಡಿಸಿ ಇಲ್ಲಿಯ ಇಜಾರಿ ಲಕಮಾಪುರದ ನಾಗರಿಕರು ಶುಕ್ರವಾರ ರಾತ್ರಿ ಹಠಾತ್ತಾಗಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕೊಲ್ಲಾ ನಾಗಪ್ಪ ದೇಸಳ್ಳಿ (55) ಬಾವಿಯಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿ. ಈತನಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಮನೆಯವರೆಲ್ಲ ಗುರುವಾರ ಹೊಲಕ್ಕೆ ಹೋಗಿದ್ದರು. ಸಂಜೆ ವೇಳೆ ತೋಟಕ್ಕೆ ಬಹಿರ್ದೆಸೆಗೆಂದು ಹೋದಾಗ ತೋಟದಲ್ಲಿನ ಪಾಳು ಬಾವಿಗೆ ಬಿದ್ದು ಮೃತಪಟ್ಟಿದ್ದನು. ಈ ಬಗ್ಗೆ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದರು. ಆದರೆ, ಪೊಲೀಸರು ಶುಕ್ರವಾರ ಸಂಜೆಯಾದರೂ ಶವ ತೆಗೆಯಲು ಬಾರದಿರುವುದನ್ನು ಖಂಡಿಸಿ ನಾಗರಿಕರು ಮೊದಲು ಇಜಾರಿ ಲಕಮಾಪುರದ ದುಂಡಿಬಸವೇಶ್ವರ ವೃತ್ತದಲ್ಲಿ ಡಿಸಿ ಕಚೇರಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ಪ್ರತಿಭಟಿಸಿದರು.
ಬಳಿಕ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಕಲ್ಲು, ತಳ್ಳುಗಾಡಿಗಳನ್ನು ನಿಲ್ಲಿಸಿ ಹೆದ್ದಾರಿ ಬಂದ್ ಮಾಡಿ, ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಘೋಷಣೆಗಳನ್ನು ಕೂಗಿದರು.
ಹೆದ್ದಾರಿ ಬಂದ್ ಮಾಡಿದಾಗ ಪೊಲೀಸರು ಸ್ಥಳಕ್ಕೆ ಬಂದು ಬಾವಿ ಆಳ ಇರುವುದರಿಂದ ನೀರೆತ್ತಲು ಪಂಪ್ ಸಿಗದೆ ಶವ ಎತ್ತಿಲ್ಲ ಎಂದು ಹೇಳುವ ಮೂಲಕ ಪ್ರತಿಭಟನಾನಿರತರನ್ನು ಸಮಾಧಾನಪಡಿಸಲು ಮುಂದಾದರು. ಆದರೆ, ಇದಕ್ಕೆ ಅವರು ಬಗ್ಗದೇ ಪ್ರತಿಭಟನೆ ತೀವ್ರಗೊಳಿಸಿದರು. ಆಗ ಸ್ಥಳಕ್ಕಾಗಮಿಸಿದ ಪೊಲೀಸ್ ಉಪಾಧೀಕ್ಷಕ ಅಂಬಿಗೇರ, ಈಗಲೇ ಎಲ್ಲಿಂದಾದರೂ ಪಂಪ್ ತರಿಸಿ ಶವ ಹೊರತೆಗೆಯುವುದಾಗಿ ಭರವಸೆ ನೀಡಿದರು. ಜನರೇಟರ್, ಪಂಪ್ ತರಿಸಿ ಶವ ಹೊರತೆಗೆಯಲು ಶುರು ಮಾಡಿದಾಗ ಜನರು ಪ್ರತಿಭಟನೆಯಿಂದ ಹಿಂದೆ ಸರಿದರು. ಕೊನೆಗೂ ಪೊಲೀಸ್ ಕಾರ್ಯಾಚರಣೆಯಿಂದ ಶವ ಪತ್ತೆಯಾಗಿದೆ.