ಮದ್ಯದಂಗಡಿಗಳಿಗೆ ಅನುಮತಿ ನೀಡಬೇಡಿ
ಶಿಗ್ಗಾಂವಿ: ರಾಜ್ಯ ಸರ್ಕಾರವು ಹೊಸ ಮದ್ಯದಂಗಡಿ ಪ್ರಾರಂಭಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ರಾಜ್ಯ ಕಾರ್ಮಿಕ ಹಿತರಕ್ಷಣಾ ಮತ್ತು ಜಾಗ್ರತ ಸಮಿತಿ ಹಾಗೂ ಜಯಕರ್ನಾಟಕ ವೇದಿಕೆಯವರು ಪ್ರತಿಭಟಿಸಿ ಶಿರಸ್ತೇದಾರ್ ರವಿ ಕೊರವರ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಪಟ್ಟಣದ ಪುರಸಭೆ ವೃತ್ತದಲ್ಲಿ ಪ್ರತಿಭಟನೆ ಮೂಲಕ ಹಳೆ, ಹೊಸ ಬಸ್ ನಿಲ್ದಾಣದ ಮೂಲಕ ಹಾದು ತಹಸೀಲ್ದಾರ್ ಕಚೇರಿಗೆ ತೆರಳಿದ ಬಳಿಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಮತ್ತು ಜಾಗ್ರತ ಸಮಿತಿ ಅಧ್ಯಕ್ಷ ಫಕ್ಕಿರೇಶ ಶಿಗ್ಗಾಂವಿ ವಿವಿಧ ಬೇಡಿಕೆಗಳ ಕುರಿತು ಮಾತನಾಡಿದವರು.
ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಕಟ್ಟಡ ಹಾಗೂ ಅದಕ್ಕೆ ಪೂರಕ ಅಸಂಘಟಿಕ ಕಾರ್ಮಿಕ ವರ್ಗವಿದೆ. ಕಾರ್ಮಿಕರ ಕುಟುಂಬಗಳು ಉದ್ಯೋಗವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ವರ್ಗಕ್ಕೆ ವರ್ಷ ಪೂರ್ತಿ ಉದ್ಯೋಗ ಸಿಗುತ್ತಿಲ್ಲ. ಇದರಿಂದ ಕಟ್ಟಡ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ ಲಕ್ಷಾಂತರ ಬಡಕುಟುಂಬಗಳು ಉಪವಾಸ ಅನುಭವಿಸುತ್ತಿದ್ದಾರೆ. ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಮುಂದೆ ಒದಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಹಾಗೂ ನ್ಯಾಯಯುತವಾಗಿ ಮನೆ ನಿರ್ಮಾಣ ಮಾಡುವಂತಹ ಮಾಲೀಕರಿಗೆ ಮರಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಅಕ್ರಮ ಮರಳಿನ ವ್ಯಾಪಾರ ಅವ್ಯಾಹತ ಸಾಗುತ್ತಿದೆ. ಇಂತಹ ವ್ಯವಸ್ಥೆ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು. ಮನೆ ನಿರ್ಮಾಣ ಮಾಡುವಂತವರಿಗೆ ನ್ಯಾಯಯುತವಾಗಿ ಮರಳು ನೀಡಲು ಸೂಕ್ತ ಕ್ರಮ ಜರುಗಿಸಬೇಕು. ಒಂದು ವೇಳೆ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರನ್ನು ನಿರ್ಲಕ್ಷಿಸಿದರೆ ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಭವಿಷ್ಯದ ಹಿತದೃಷ್ಟಿಯಿಂದ ಹೊಸ ಮದ್ಯದ ಅಂಗಡಿಗಳನ್ನು ತೆರೆಯುವ ವಿಚಾರ ಕೈ ಬಿಡಬೇಕು. ರಾಜ್ಯವನ್ನು ರಾಮ ರಾಜ್ಯವನ್ನಾಗಿ ಮಾಡಿ, ಅದು ಸಾಧ್ಯವಾಗದಿದ್ದರೆ ಸಾರಾಯಿ ಸಾಮ್ರಾಜ್ಯವನ್ನಾಗಿ ಮಾತ್ರ ಮಾಡಬೇಡಿ. ಇದರಿಂದ ಯುವ ಜನತೆಗೆ ದಾರಿ ತಪ್ಪುವ ಅಪಾಯವಿದೆ ಎಂದರು.
ಜಿಲ್ಲಾಧ್ಯಕ್ಷ ಡಿ.ಎಸ್. ಓಲೇಕಾರ, ತಾಲೂಕಾಧ್ಯಕ್ಷ, ಜೈಲಾನಿ ಜಂಗ್ಲಿ, ಇಮಾಮಹುಸೇನ್ ಅದಂಬಾಯಿ, ಅಬ್ಬಾಸಅಲಿ, ಕನ್ನಡ ಜಾಗೃತಿ ವೇದಿಕೆಯ ಮಹಾದೇವ ಹಡಪದ, ಜಯಕರ್ನಾಟಕ ಅಧ್ಯಕ್ಷ ದುರ್ಗಪ್ಪ ವಡ್ಡರ, ಖಾಜಾಮೈನು ಸುಣಗಾರ, ಗುಡುಸಾಬ ಮುಕ್ಕೇರಿ, ಲಕ್ಷ್ಮಣ ವಡ್ಡರ, ಮಹ್ಮಸಾಧಿಕ್ ಬಸರೀಕಟ್ಟಿ, ಬಸವರಾಜ ಲಂಡತ್ತೆನವರ, ಶಿವು ಅಮರಗೋಳ, ರಾಮಣ್ಣ ವಡ್ಡರ, ನೀಲಕಂಠಪ್ಪ ಲಂಡತ್ತಿನವರ ಇತರರಿದ್ದರು.