ಖಾಸಗಿ ಶಾಲೆ ಶಿಕ್ಷಕರ ಬೇಡಿಕೆ ಈಡೇರಿಸಿ
ಹಾನಗಲ್ಲ: ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಸರ್ಕಾರವೇ ನಿರ್ಲಕ್ಷಿಸಿದೆ. ಶೀಘ್ರ ಖಾಸಗಿ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಎ.ಐ. ಮಳೆಣ್ಣನವರ ಎಚ್ಚರಿಸಿದ್ದಾರೆ.
ಹಾನಗಲ್ಲಿನಲ್ಲಿ ಶನಿವಾರ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಹಾನಗಲ್ಲ ತಹಸೀಲ್ದಾರ್ ಮೂಲಕ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿ ನಂತರ ಮಾಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಿದರೂ ಸರ್ಕಾರ ಇಲ್ಲಿನ ನೌಕರರ ಬೇಡಿಕೆಗಳನ್ನು ಸಹಾನುಭೂತಿಯಿಂದಲೂ ಪರಿಗಣಿಸಿ ಈಡೇರಿಸುತ್ತಿಲ್ಲ. ಖಾಸಗಿ ಸಂಸ್ಥೆಗಳ ನೌಕರರ ಬೇಡಿಕೆ ಈಡೇರಿಸುವ ವಿಷಯದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರದ ಈ ನೀತಿಯಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸ್ಥಿತಿ ಗಂಭೀರವಾಗಿದೆ. ಯಾವುದೇ ಸೌಲಭ್ಯಗಳು ಸಕಾಲಿಕವಾಗಿ ನೌಕರರಿಗೆ ತಲುಪುತ್ತಿಲ್ಲ ಎಂದು ಆಪಾದಿಸಿದರು.
ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಾಂಕೇತಿಕ ಧರಣಿ ನಡೆಸಿತು. ಬೇಡಿಕೆ ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದೆ.
ಪ್ರತಿಭಟನೆ ಹಾಗೂ ಮನವಿ ಅರ್ಪಿಸುವ ಸಂದರ್ಭದಲ್ಲಿ ಪ್ರಾಚಾರ್ಯ ಕೆ.ಎಸ್. ಕುಂಬಾರ, ಎ.ಎ. ನಾಶಿಪುಡಿ, ಸಂಘದ ಸಂಚಾಲಕ ಐ.ಪಿ. ಕುಂಕೂರ ಹಾಗೂ ಗಣೇಶ ವಡ್ಡರ, ಮುಖ್ಯೋಪಾಧ್ಯಾಯ ಸಿ.ಎಸ್. ವಸ್ತ್ರದ, ವಿ.ಎಲ್. ಚೌಹಾಣ್, ಸದಸ್ಯರಾದ ಡಿ.ಎನ್. ಕಳಗೊಂಡ, ಎಂ.ಎಸ್.ಅಮರದ, ಎಂ.ಎಚ್. ಸಿರ್ಸಿ, ವಿ.ಎಂ. ಕಬ್ಬಿಣಕಂತಿಮಠ, ಎಸ್.ಎಸ್. ಸವಣೂರು, ಹನೀಫ್, ಎಸ್.ಆರ್. ಶಕುನಳ್ಳಿ, ನಿರಂಜನ ಗುಡಿ, ಎಂ.ಎಸ್. ಕೋಟಿ, ಸಂತೋಷ ವಡ್ಡರ, ಎಸ್.ಬಿ. ಶಿವಕುಮಾರ, ಸಿ.ಆರ್.ವಡ್ಡರ. ಸುನಿತಾ ಉಪ್ಪಿನ್, ಜೆ.ಎಂ. ಅಂಗಡಿ ಇದ್ದರು.