ನಾಳೆ ಸುವರ್ಣಸೌಧಕ್ಕೆ ಕಬ್ಬಿಗರ ಮುತ್ತಿಗೆ
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಸರ್ಕಾರ ಪ್ರತಿ ಟನ್ ಕಬ್ಬಿಗೆ ರು. 2500 ನಿಗದಿಗೊಳಿಸಿದೆ. ಆದರೆ, ರು. 1800ಕ್ಕಿಂತ ಹೆಚ್ಚಿಗೆ ದರ ನೀಡಲಾಗದೆಂದು ಸಂಗೂರಿನ ಜಿಎಂ ಶುಗರ್ಸ್ ಸಕ್ಕರೆ ಕಾರ್ಖಾನೆಯ ಮಾಲೀಕರೇ ಹೇಳಿಕೆ ನೀಡಿದ್ದಾರೆ. ಸರ್ಕಾರ ನಿಗದಿಗೊಳಿಸಿದ ದರವನ್ನೇ ನೀಡುವಂತೆ ಜಿಎಂ ಕಾರ್ಖಾನೆ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ನ. 25ರಂದು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಜಿಲ್ಲಾ ಕಬ್ಬು ಬೆಳೆಗಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಜಿಲ್ಲಾ ಕಬ್ಬು ಬೆಳಗಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಅಶೋಕರೆಡ್ಡಿ ಮರ್ಚರಡ್ಡೆರ ಮಾತನಾಡಿ, 40 ವರ್ಷದ ಲೀಸ್ ಆಧಾರದ ಮೇಲೆ ಗುತ್ತಿಗೆ ಪಡೆದಿರುವ ಜಿ.ಎಂ. ಶುಗರ್ಸ್‌ನವರು ಸರ್ಕಾರ ನಿಗದಿಪಡಿಸಿರುವ ದರ ಕೊಡಲು ಸಾಧ್ಯವಿಲ್ಲ ಎಂದಿರುವುದು ಖಂಡನೀಯ. ಸೂಕ್ತ ದರಕ್ಕೆ ಆಗ್ರಹಿಸಿ ಜಿಲ್ಲೆಯ 2 ಸಾವಿರ ರೈತರು ಚಳಿಗಾಲದ ಅಧಿವೇಶನ ಆರಂಭವಾಗುವ ದಿನವೇ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಹೇಳಿದರು.
ಕಬ್ಬು ಹಾಳಾಗಬಾರದೆಂದು...
ರೈತರಿಗೆ ಹಾನಿಯಾದರೂ ಸರಿ ಎನ್ನುವ ಕಾರಣಕ್ಕೆ ಸರ್ಕಾರ ನಿಗದಿಪಡಿಸಿದ ದರವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದೇವೆ. ಹೀಗಿರುವಾಗ ಜಿ.ಎಂ. ಶುಗರ್ಸ್‌ನ ಎಂ.ಡಿ. ಲಿಂಗರಾಜ ಸರ್ಕಾರ ನಿಗದಿಪಡಿಸಿದ ಕಬ್ಬಿನ ದರ ಸಂಪೂರ್ಣ ಅವೈಜ್ಞಾನಿಕ. ಸರ್ಕಾರದ ದರದ ಪ್ರಕಾರ ಹಣ ಪಾವತಿಸಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಕಬ್ಬು ನುರಿಸುವ ಕಾರ್ಯ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದು ಸರಿಯಲ್ಲ. ಕಬ್ಬು ಹಾಳಾಗಬಾರದೆಂಬ ಒಂದೇ ಕಾರಣಕ್ಕೆ ಕಾರ್ಖಾನೆ ಬಂದ್ ಮಾಡಿ ಪ್ರತಿಭಟನೆ ನಡೆಸಿಲ್ಲ. ಕಳೆದ ಸಾಲಿನಲ್ಲಿ ಸಂಗೂರು ಕಾರ್ಖಾನೆ ರೈತರಿಂದ ರು. 300-400 ಕಿತ್ತುಕೊಂಡಿದೆ. ಉತ್ತರ ಕರ್ನಾಟಕದ ಇತರ ಕಾರ್ಖಾನೆಗಳಿಗಿಂತ ಕಡಿಮೆ ದರ ನೀಡಿದೆ. ಆದರೂ ರೈತರು ಸಹಕಾರದಿಂದ ಕಬ್ಬು ಪೂರೈಸಿದ್ದರು ಎಂದು ಹೇಳಿದರು.
ರಾಜಿನಾಮೆ ನೀಡಲಿ
ಸರ್ಕಾರ ರೈತ ಸಂಘಟನೆಗಳೊಂದಿಗೆ ಸಮಗ್ರ ಚರ್ಚೆ ನಡೆಸಿ ಉತ್ತರ ಕರ್ನಾಟಕ ರೈತರ ಕಬ್ಬಿಗೆ ರು. 2500, ದಕ್ಷಿಣ ಕರ್ನಾಟಕ ರೈತರ ಕಬ್ಬಿಗೆ ರು. 2600 ದರ ನಿಗದಿ ಮಾಡಿದೆ. ಇದಕ್ಕೆ ರೈತ ಸಂಘಟನೆಗಳು ಒಪ್ಪಿಲ್ಲ. ಜಿ.ಎಂ. ಶುಗರ್ಸ್ ಕಾರ್ಖಾನೆ ರು. 1800ರಂತೆ ದರ ನಿಗದಿ ಮಾಡಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿದೆ. ಸಕ್ಕರೆ ಸಚಿವರು, ಜಿಲ್ಲಾಡಳಿತ, ಕಾರ್ಖಾನೆಯ ಎಂ.ಡಿ. ಜತೆ ಮಾತುಕತೆ ನಡೆಸಿ ಸರ್ಕಾರ ನಿಗದಿಪಡಿಸಿದ ದರವನ್ನೇ ಕೊಡಿಸುವ ವ್ಯವಸ್ಥೆ ಮಾಡಬೇಕು. ಸಕ್ಕರೆ ಸಚಿವರು ಕಾರ್ಖಾನೆಯಿಂದ ನ್ಯಾಯಯುತ ಬೆಲೆ ಕೊಡಿಸಬೇಕು, ಇಲ್ಲದಿದ್ದರೆ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಕಬ್ಬು ಬೆಳೆಗಾರ ಕ್ಷೇಮಾಭಿವೃದ್ಧಿ ಸಂಘದ ಸಿದ್ದರಾಜ ಕಲಕೋಟಿ, ದಾನಪ್ಪ ಕೆಂಗೋಡ ಮಾತನಾಡಿದರು. ಶಂಕ್ರಪ್ಪ ಸಣ್ಣಪ್ಪನವರ, ಡಿ.ಎಂ. ಅಣ್ಣಿಗೇರಿ, ಪ್ರಭುರೆಡ್ಡಿ ಭರ್ಮರೆಡ್ಡಿ, ಎಂ.ವೈ. ಮರ್ಚರೆಡ್ಡಿ, ವಿ.ಎಚ್. ರೆಡ್ಡೇರ, ವಿ.ಎಚ್. ಮರ್ಚರೆಡ್ಡಿ, ಮಹಾಂತೇಶ ಓಲೇಕಾರ, ನಾಗನಗೌಡ ಕಾಕಡೆ, ಆನಂದಸ್ವಾಮಿ ಕುಲಕರ್ಣಿ, ವೈ.ಎಚ್. ಮರ್ಚರೆಡ್ಡಿ, ವಿ.ಎಫ್. ಹುಲ್ಲತ್ತಿ, ವೈ.ಜೆ. ಮರ್ಚರೆಡ್ಡಿ, ವಿರೂಪಾಕ್ಷಪ್ಪ ಕಲಕೋಟಿ, ಸಿ.ಜಿ. ಕಲಕೋಟಿ, ಶಿವಾನಂದ ಕಲಕೋಟಿ, ಜೆ.ಡಿ.ಚಿಕ್ಕರೆಡ್ಡೇರ, ಪಿ.ಎಸ್.ಪಾಟೀಲ, ವಿ.ಡಿ.ಹನುಮಂತಗೌಡ, ಶ್ರೀನಿವಾಸ ಶಿವಪೂಜಿ ಇದ್ದರು.