ಪಿಂಚಣಿ, ಸೇವಾ ಭದ್ರತೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 23
ನಿವೃತ್ತಿ ನಂತರದ ಪಿಂಚಣಿ ಸೌಲಭ್ಯ ಮುಂತಾದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಬ್ಯಾಡಗಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪುರಸಭೆಯಿಂದ ಮೆರವಣಿಗೆ ಮಾಡಿದ ನೂರಾರು ಶಿಕ್ಷಕರು ತಹಸೀಲ್ದಾರ್ ಕಚೇರಿ ಮುಂದೆ ಸಭೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ತಾರತಮ್ಯವೇಕೆ?: ಸಂಘದ ಗೌರವಾಧ್ಯಕ್ಷ ಮರಿಗೌಡ್ರ ಮಾತನಾಡಿ, ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಕರ ನಡುವಿರುವ ತಾರತಮ್ಯ ಸರಿಪಡಿಸಬೇಕು, ಸರ್ಕಾರಿ ಶಾಲೆ ಶಿಕ್ಷಕರಂತೆ ತಾವೂ ವಿದ್ಯಾರ್ಹತೆ ಹೊಂದಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದ್ದೇವೆ. ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದರೂ ಅವರಿಗೆ ಸಿಗುವ ಸೌಲಭ್ಯ ನಮಗೇಕಿಲ್ಲ? 2006ರ ಬಳಿಕ ನೇಮಕವಾದ ಖಾಸಗಿ ಶಾಲಾ ನೌಕರರಿಗೆ ನಿವೃತ್ತಿ ಬಳಿಕ ಪಿಂಚಣಿ ಸೌಲಭ್ಯವಿಲ್ಲ. ಇಂಥ ತಾರತಮ್ಯವೇಕೆ ಎಂದು ಪ್ರಶ್ನಿಸಿದರು.
ಅಧ್ಯಕ್ಷ ಸಿ.ಎಸ್. ಪಾಟೀಲ ಮಾತನಾಡಿ, 2006 ಏ. 1ರ ಬಳಿಕ ನೇಮಕವಾದ ಶಿಕ್ಷಕರಿಗೆ ಶೇ. 10ರಷ್ಟು ವಂತಿಗೆ ಆಧಾರಿತ ಪಿಂಚಣಿಯನ್ನು ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಆದರೆ, ಶಿಕ್ಷಕರಿಗೆ ಬಿಡಿಗಾಸೂ ನೀಡುತ್ತಿಲ್ಲ. ಆಡಳಿತ ಮಂಡಳಿಯೇ ನೌಕರರಿಗೆ ಶೇ. 10ರಷ್ಟು ಹಣ ವಂತಿಗೆ ಭರಿಸುವುದು ಆಗದ ಮಾತು. ಸರ್ಕಾರವೇ ಹಣ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಎಚ್.ಬಿ. ಬೆಂಚಳ್ಳಿ ಮಾತನಾಡಿ, ಹೈಕೋರ್ಟ್ ತೀರ್ಪಿನಲ್ಲಿ ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರಿಗೂ ಸರ್ಕಾರದ ಎಲ್ಲ ಸೌಲಭ್ಯ ನೀಡುವಂತೆ ಸೂಚಿಸಿದೆ. ಆದರೂ ಸರ್ಕಾರ ಈ ಆದೇಶ ಪಾಲಿಸುತ್ತಿಲ್ಲ. ಹೆಚ್ಚುವರಿ ಶಿಕ್ಷಕರ ನಿಯೋಜನೆ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.
ಸೇವಾ ಭದ್ರತೆ ಕೊಡಿ: ಉಪಾಧ್ಯಕ್ಷ ಪಿ.ಎಂ. ಶಿಡೇನೂರ ಮಾತನಾಡಿ, 1987ರಿಂದ 1995ರ ವರೆಗೆ ಚಾಲ್ತಿಯಲ್ಲಿದ್ದ ಖಾಸಗಿ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಿದ ಕ್ರಮ ಸ್ವಾಗತಾರ್ಹ. ಆದರೂ ಬಾಕಿ ಉಳಿದ 1699 ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಪರಿಶೀಲನಾ ಹಂತದಲ್ಲಿರುವ 274 ಶಾಲೆಗಳನ್ನು ಕೂಡಲೇ ಅನುದಾನ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.
ಸಂಘಟನಾ ಕಾರ್ಯದರ್ಶಿ ಬಿ.ಎಫ್. ದೊಡ್ಮನಿ ಮಾತನಾಡಿ, 2008ರ ಬಳಿಕ ಖಾಸಗಿ ಶಾಲೆಗಳಲ್ಲಿರುವ ಖಾಲಿ ಹುದ್ದೆ ಭರ್ತಿ ಮಾಡಲು ಅನುಮತಿ ನೀಡಿಲ್ಲ. ಹೀಗಾಗಿ, ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚಾಗುತ್ತಿದೆ. ಸೇವಾ ಭದ್ರತೆ ಇಲ್ಲದೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರು ಕೆಲಸ ನಿರ್ವಹಿಸುವಂತಾಗಿದೆ. ತಕ್ಷಣ ಖಾಲಿ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲೆ ಶಿಕ್ಷಕಿಯರಿಗೆ 180 ದಿನಗಳ ಪ್ರಸೂತಿ ರಜೆಯಿದೆ. ಖಾಸಗಿ ಶಾಲೆ ಶಿಕ್ಷಕಿಯರಿಗೂ ಈ ಸೌಲಭ್ಯ ನೀಡಬೇಕು. ವೈದ್ಯನಾಥನ್ ಸಮಿತಿ ವರದಿಯಂತೆ ಅಧಿಕಾರಿ ವರ್ಗದವರಿಗೆ ಮಾತ್ರ ಬಡ್ತಿ ಸಿಗುತ್ತದೆ. ಇದನ್ನು ಶಿಕ್ಷಕರಿಗೂ ಅನ್ವಯಿಸಬೇಕು. ಯೋಜನಾ ಶೀರ್ಷಿಕೆಯಡಿ ಶಿಕ್ಷಕರಿಗೆ ನೀಡುತ್ತಿರುವ ವೇತನವನ್ನು 5 ವರ್ಷಗಳ ಬಳಿಕ ಯೋಜನೇತರ ಶೀರ್ಷಿಕೆಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆ ಸಲ್ಲಿಸಿದರು.
ಬಿ.ಎನ್. ಬಣಕಾರ, ಎಸ್.ಕೆ. ಹೊಸಮನಿ, ಪಾಂಡು ಜಾಧವ, ಎಂ.ವಿ. ನೆಲವಿಗಿ, ಎ.ಟಿ. ಪೀಠದ, ಪ್ರಶಾಂತ್ ಗೊರವರ, ಎ.ವಿ. ಪಾಟೀಲ, ದುರ್ಗದ ಇದ್ದರು.