ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಾಧ್ಯಮಿಕ ಶಾಲಾ ನೌಕರರ ಪ್ರತಿಭಟನೆ

Vishwanath S
Updated On : 24 Nov 2013, 2:42 am

ಹಿರೇಕೆರೂರು: ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ, ಶಿಕ್ಷಕೇತರರ ಹಾಗೂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಮಾಧ್ಯಮಿಕ ಶಾಲಾ ನೌಕರರು ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ಸಾವಜ್ಜಿಯವರ ನೇತೃತ್ವದಲ್ಲಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಗುರುಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಸಾಗಿ ತಹಸೀಲ್ದಾರ್ ಕಚೇರಿ ಎದುರು ಸಭೆಯಾಗಿ ಮಾರ್ಪಟ್ಟಿತು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಎಂ.ಬಿ. ಸಾವಜ್ಜಿಯವರ ಮಾತನಾಡಿ, ಸಂಘದ ಬೇಡಿಕೆಗಳಾದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅನುದಾನರಹಿತ ಸೇವಾವಧಿಯ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲಾ ನೌಕರರಿಗೆ ನೀಡಬೇಕು. 2006ರ ಡಿಸೆಂಬರ್ ನಂತರ ನೇಮಕವಾದ ಅನುದಾನಿತ ಸಿಬ್ಬಂದಿಗೆ ಸರ್ಕಾರಿ ನೌಕರರಿಗೆ ಜಾರಿಗೊಳಿಸಿದ ಅಂಶದಾಯಿ ವಂತಿಗೆ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು. ಆಡಳಿತ ಮಂಡಳಿ ತುಂಬಬೇಕಾದ ವಂತಿಕೆಯನ್ನು ಸರ್ಕಾರವೇ ಭರಿಸಬೇಕು. ಅನುದಾನಿತ ಸಂಸ್ಥೆಗಳಲ್ಲಿ 2013ರ ವರೆಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಜರುಗಿಸಬೇಕು. ಹೆಚ್ಚುವರಿ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿ ಶಿಕ್ಷಕರ ಅನುಪಾತವನ್ನು 50ಕ್ಕೆ ನಿಗದಿಪಡಿಸಬೇಕು. 1994-95ರ ವರೆಗೆ ಅರಂಭಗೊಂಡ ಬಾಕಿ ಉಳಿದಿರುವ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ವೈದ್ಯನಾಥನ್ ವರದಿಯ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಬೇಕು. ವೃತ್ತಿ ಶಿಕ್ಷಕರ ಸಮಸ್ಯೆಗಳಿಂದ ಶಿಕ್ಷಕರು ಬೀದಿಪಾಲಾಗಿದ್ದು ಅವರ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬೇಕು ಎಂದು ಆಗ್ರಹಿಸಿದರು.
ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡಬೇಕು ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವವರನ್ನು ಕಾಯಂಗೊಳಿಸುವುದು, 2007ರ ವರ್ಗಾವಣೆ ನೀತಿಗೆ ತಿದ್ದುಪಡಿ ತರುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಶಕುಂತಲಾ ಚೌಗುಲೆ ಅವರ ಮುಖಾಂತರ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರ್ಯದರ್ಶಿ ಬಿ.ಐ. ಲೆಕ್ಕಪ್ಪನವರ, ಆರ್.ಬಿ. ಹಂಜಿ, ಸಿ.ಎಸ್. ಚಿಗೌಡ್ರ, ಜಿ.ಐ. ಕೆಂಚ್ಚಕ್ಕನವರ, ಸಿ.ಐ. ಹುಲ್ಲತ್ತಿ, ಯು.ಆರ್. ಪಾಟೀಲ, ಕೇಂದ್ರ ಸಮಿತಿ ಸದಸ್ಯ ಎಂ.ಬಿ. ಕಾಗಿನಲ್ಲಿ, ಆರ್.ಬಿ. ಹೊಸಗೌಡ್ರ, ಎಸ್.ಎಂ. ಹಕ್ಕಳ್ಳಿ, ಆರ್.ಬಿ. ಪಾಟೀಲ, ಎಸ್.ಬಿ. ಪಾಟೀಲ, ರಾಜು ಬೆಟ್ಟಳ್ಳೆರ, ಯು.ಜಿ ಹಂಚಿನಮನಿ, ಪಿ.ಎಚ್. ಇಂಗಳಗೊಂದಿ ಸೇರಿದಂತೆ ತಾಲೂಕಿನ ಎಲ್ಲ ಅನುದಾನಿತ ಹಾಗೂ ಅನುದಾನಕ್ಕೆ ಅರ್ಹ ಶಿಕ್ಷಣ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಸಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತಿಪ್ಪಣ್ಣನವರ, ಮೃತ್ಯುಂಜಯ ವಿದ್ಯಾಪೀಠದ ಅಧ್ಯಕ್ಷ ಪಿ.ವಿ. ಕೆರೂಡಿ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ತುಷಾರ ಹೊಸೂರ ಬೆಂಬಲ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement