ಶಕ್ತಿ ಉತ್ಪಾದನೆ ದೇಶದ ಅಭಿವೃದ್ಧಿ ಸಂಕೇತ: ಹೊಸಮಠ ಶ್ರೀ
ಹಾವೇರಿ: ಜಗತ್ತು ಶಕ್ತಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶಕ್ತಿ ಉತ್ಪಾದನೆ, ಬಳಕೆಯಲ್ಲಿ ಮಂಚೂಣಿಯಲ್ಲಿರುವುದು ರಾಷ್ಟ್ರದ ಅಭಿವೃದ್ಧಿಯ ದ್ಯೋತಕ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಮನುಷ್ಯ ಶಕ್ತಿ ಬಳಸಿಕೊಳ್ಳಬೇಕೆಂದು ನಗರದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ಹಾವೇರಿ ಜಿಲ್ಲಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಆಶ್ರಯದಲ್ಲಿ ನಗರದ ಹೊಸಮಠದ ಸಭಾಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಪ್ರೊ. ಕೆ.ಸಿ. ಕುಲಕರ್ಣಿ ಮಾತನಾಡಿ, ಪರ್ಯಾಯ ಶಕ್ತಿ ಮೂಲಕ ಬಳಕೆ ಕುರಿತಂತೆ ಸಂಶೋಧನೆ ನಡೆಸಲು ಯುವ ವಿಜ್ಞಾನಗಳಿಗೆ ವಿಪುಲ ಅವಕಾಶಗಳಿವೆ. ಯುವಕರು ಸಂಶೋಧನೆಯತ್ತ ಸನ್ನದ್ಧರಾಗಬೇಕೆಂದು ಹೇಳಿದರು.
ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಲೇಖಕ ಆರ್.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಿಂದ ಆಯ್ಕೆಯಾದ 10 ಪುಟಾಣಿ ವಿಜ್ಞಾನಿಗಳು ನ. 30ರಿಂದ ಬಾಗಲಕೋಟೆಯಲ್ಲಿ ನಡೆಯುವ ಅಖಿಲ ಕರ್ನಾಟಕ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸುವರು. ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರುವ 30 ಮರಿ ವಿಜ್ಞಾನಿಗಳು ಡಿ. 27ರಿಂದ ಐದು ದಿನಗಳ ಭೂಪಾಲ್ದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಕ್ಕಳ ಸಮಾವೇಶದಲ್ಲಿ ಭಾಗವಹಿಸುವ ಭಾಗ್ಯ ಪಡೆಯುವರು ಎಂದರು.
ವಿಷಯ ಪರಿವೀಕ್ಷಕ ಆರ್.ಎನ್. ಹುರಳಿ, ಉಪನ್ಯಾಸಕರಾದ ಪಿ.ಬಿ. ಮುದ್ದಿ, ಆರ್.ಟಿ. ಮುಗದೂರ, ಸ್ನೇಹಲತಾ ತೆಂಗಾಳಿ ಇದ್ದರು. ಜಿಲ್ಲಾ ಸಂಯೋಜಕ ಎ.ಎಚ್. ಕಬ್ಬಿಣಕಂತಿಮಠ ಸ್ವಾಗತಿಸಿದರು. ವಿ.ಎಂ. ಗಡ್ಡದೇವರಮಠ ವಂದಿಸಿದರು. ಜಿ.ಎಸ್. ಹತ್ತಿಮತ್ತೂರ ನಿರೂಪಿಸಿದರು.
ರಾಜ್ಯ ಮಟ್ಟಕ್ಕೆ ಆಯ್ಕೆ: ಶಕ್ತಿ ಸಮೃದ್ಧಿಗಾಗಿ ಸಂಶೋಧಿಸಿ, ಸಂರಕ್ಷಿಸಿ ಭವಿಷ್ಯಕ್ಕಾಗಿ ಉಳಿಸಿ ಶೀರ್ಷಿಕೆಯಡಿ ಪ್ರಬಂಧ ಮಂಡಿಸಿದ 10 ಪುಟಾಣಿ ವಿಜ್ಞಾನಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆಮಾಡಿ ಪ್ರಶಸ್ತಿ ವಿತರಿಸಲಾಯಿತು. ಹೊಸಮಠದ ಪ್ರಸಾದ ಶಿಗ್ಲಿ, ಎಸ್ಜೆಎಂ ಪ್ರೌಢಶಾಲೆಯ ಲಕ್ಷ್ಮೀ ಹಿರೇಮಠ, ಪ್ರಿಯಾ ಕೊರವರ, ಎಲ್ಇಎಂಎಸ್ ಹೈಸ್ಕೂಲಿನ ಜೈನ್, ಮೊರಾರ್ಜಿ ವಸತಿ ಶಾಲೆಯ ನಾರಾಯಣ ಬಳಿಗಾರ, ಹೊಸರಿತ್ತಿ ಗಾಂಧಿ ಗ್ರಾಮೀಣ ಕುರುಕುಲದ ಚೇತನ, ಹಾವನೂರ ಸರ್ಕಾರಿ ಪ್ರೌಢಶಾಲೆಯ ನಟರಾಜ ಕತ್ತೆಬೆನ್ನೂರ, ಗುತ್ತಲದ ಎಸ್ಆರ್ಎಸ್ ಹೈಸ್ಕೂಲಿನ ಧನಂಜಯ ಹಡಗಿ, ಗುತ್ತಲ ಆರ್.ಕೆ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾಶ್ರೀ, ಹನುಮಂತ ನವಲಗಣ್ಣ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.