ಇಂದು ಆರಂಭ
ಹಾನಗಲ್ಲ: ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ನ. 25ರಂದು ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗುತ್ತದೆ ಎಂದು ಶಾಸಕ ಮನೋಹರ ತಹಶೀಲ್ದಾರ ತಿಳಿಸಿದರು.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಣ್ಣ ಮತ್ತು ಅತಿ ಸಣ್ಣ ರೈತರಿಂದ 25 ಕ್ವಿಂಟಲ್ ಗೋವಿನ ಜೋಳವನ್ನು ಮಾತ್ರ ಖರೀದಿಸಬೇಕೆಂಬ ನಿಯಮಕ್ಕೆ ಶೀಘ್ರದಲ್ಲಿ ತಿದ್ದುಪಡಿ ಆಗಲಿದೆ. ಪ್ರತಿ ರೈತರಿಂದ 100 ಕ್ವಿಂಟಲ್ವರೆಗೆ ಗೋವಿನ ಜೋಳ ಖರೀದಿಸಲು ಸರ್ಕಾರ ಅನುಮತಿ ನೀಡಲಿದೆ ಎಂದರು.
ಆಹಾರ ಮತ್ತು ನಾಗರಿಕ ಪೂರೈಕೆ ಹಾವೇರಿ ಜಿಲ್ಲಾ ವ್ಯವಸ್ಥಾಪಕ ಪರಮೇಶ್ವರಯ್ಯ ಮಾತನಾಡಿ, ಖರೀದಿ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ನ. 25ರಂದು ಖರೀದಿ ಆರಂಭವಾಗುತ್ತದೆ. ರೈತರು ಗೋವಿನ ಜೋಳದ ಸ್ಯಾಂಪಲ್ ತಂದು, ಗುಣಮಟ್ಟದ ಬಗ್ಗೆ ಒಪ್ಪಿಗೆ ಪಡೆದು ಮಾರಾಟಕ್ಕೆ ತರಬೇಕು. ರೈತರು ತಮ್ಮ ಪಹಣಿ ತರಬೇಕು. ಅದರಲ್ಲಿ ಕಂದಾಯ ಇಲಾಖೆ ಗೋವಿನ ಜೋಳ ಬೆಳೆ ಬಗ್ಗೆ ನಮೂದಿಸಿರಬೇಕು. ಕ್ಷೇತ್ರದಲ್ಲಿ ಗೋವಿನಜೋಳ ಬೆಳೆದಿರುವ ಬಗ್ಗೆ ಕಂದಾಯ ಇಲಾಖೆಯ ಉಪತಹಸೀಲ್ದಾರ್ ನೀಡಿದ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಸದ್ಯ ಪ್ರತಿ ರೈತರಿಂದ 25 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಅವಕಾಶವಿದೆ. ಪ್ರತಿ ಕ್ವಿಂಟಲ್ಗೆ ರು. 1310 ಬೆಂಬಲ ಬೆಲೆ ನಿಗದಿಪಡಿಸಿದೆ. ವಾರದಲ್ಲಿ ರೈತರಿಗೆ ಹಣ ನೀಡಲಾಗುತ್ತದೆ ಎಂದರು.