ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಿರಿದಾಗುತ್ತಿದೆ ಮುಲ್ಲಾನ ಕೆರೆ

Mainashree
Updated On : 25 Nov 2013, 11:06 am

ಕನ್ನಡಪ್ರಭ ವಾರ್ತೆ, ಹಾವೇರಿ, ನ. 24
ಐತಿಹಾಸಿಕ ಹಿನ್ನೆಲೆಯಿರುವ ಕೆರೆ ಇಂದು ಪಾಚಿಗಟ್ಟಿ ಹಸಿರಾಗಿದೆ. ಬೃಹತ್ ವಿಸ್ತಾರ ಹೊಂದಿ ನಗರದ ಜನತೆಗೆ ನೀರು ಹಾಗೂ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದ್ದ ಕೆರೆಯೊಂದು ನಗರಸಭೆ ನಿರ್ಲಕ್ಷ್ಯದಿಂದ ದಿನೇದಿನೇ ಕಿರಿದಾಗುತ್ತಿದೆ. ನಗರದ ತ್ಯಾಜ್ಯವಸ್ತು ವಿಲೇವಾರಿ ತಾಣವಾಗಿಯೂ ಮಾರ್ಪಟ್ಟಿದೆ.
ಇದು ಇಲ್ಲಿಯ ಬಸವೇಶ್ವರ ನಗರದ ಪಕ್ಕದಲ್ಲೇ ಇರುವ ಮುಲ್ಲಾನ ಕೆರೆ ದುಸ್ಥಿತಿ. ಒಂದು ಕಾಲದಲ್ಲಿ ಅರ್ಧ ಹಾವೇರಿ ನಗರಕ್ಕೆ ಕುಡಿವ ನೀರು ಒದಗಿಸುವಷ್ಟು ವಿಸ್ತಾರವಾಗಿದ್ದ ಮುಲ್ಲಾನ ಕೆರೆ ಇಂದು ಮುಚ್ಚಿ ಹೋಗುತ್ತಿದೆ. ನಗರದಲ್ಲಿನ ಕೆರೆ, ಬಾವಿ ಸೇರಿದಂತೆ ಜಲಮೂಲಗಳನ್ನು ಕಾಪಾಡುವ ಜವಾಬ್ದಾರಿ ಹೊಂದಿರುವ ನಗರಸಭೆಯೇ ಈ ಕೆರೆಯಲ್ಲಿ ತ್ಯಾಜ್ಯ ವಸ್ತು ವಿಲೇವಾರಿ ಮಾಡುತ್ತಿದೆ. ಇನ್ನು ಕೆಲ ಖಾಸಗಿ ವ್ಯಕ್ತಿಗಳೂ ಅತಿಕ್ರಮಣ ಮಾಡಿಕೊಳ್ಳುತ್ತಿದ್ದು, ಕೆರೆ ನೀರು ಕಲುಷಿತಗೊಂಡು ಜಾನುವಾರುಗಳೂ ಕುಡಿಯದಂತಾಗಿದೆ.
ಕಿರಿದಾಗುತ್ತಿರುವ ಕೆರೆ: ನಗರದ ಜನಸಂಖ್ಯೆ ಬೆಳೆದಂತೆಲ್ಲ ಮುಲ್ಲಾನ ಕೆರೆ ಒತ್ತುವರಿಯಾಗಿ ಕಿರಿದಾಗುತ್ತಲೇ ಇದೆ. ಒಂದು ಕಾಲಕ್ಕೆ 14 ಎಕರೆಯಷ್ಟು ವಿಸ್ತಾರವಾಗಿದ್ದ ಕೆರೆ ಇಂದು 2 ಎಕರೆಯಷ್ಟೂ ಅಸ್ತಿತ್ವ ಉಳಿಸಿಕೊಂಡಿಲ್ಲ. ಈ ಹಿಂದೆ ಮಳೆಗಾಲದಲ್ಲಿ ಒಮ್ಮೆ ಕೆರೆ ಭರ್ತಿಯಾದರೆ ಬೇಸಿಗೆವರೆಗೂ ನೀರು ಇರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ. ಈಗಲೇ ಕೆರೆ ನೀರು ಬತ್ತಿ ಹೋಗಿದೆ. ಇರುವ ನೀರೂ ಬಳಕೆಗೆ ಯೋಗ್ಯವಾಗಿಲ್ಲ. ಪಾಚಿಗಟ್ಟಿ ನೀರು ಹಸಿರಾಗಿದ್ದು, ಕೆರೆಯ ಸುತ್ತ ತ್ಯಾಜ್ಯದ ರಾಶಿಯೇ ಬಿದ್ದಿದೆ. ತೊಟ್ಟು ನೀರಿಗೂ ಪರದಾಡುತ್ತಿರುವ ನಗರದಲ್ಲಿ ಇರುವ ಜಲಮೂಲವನ್ನು ಹಾಳು ಮಾಡಲು ಬಿಟ್ಟಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಒತ್ತುವರಿ
ಮುಲ್ಲಾನ ಕೆರೆ ಸುತ್ತ ಇಂದು ಕಟ್ಟಡಗಳು ತಲೆ ಎತ್ತಿವೆ. ಪಕ್ಕದಲ್ಲೇ ಶಾಲೆಯೊಂದು ಪ್ರಾರಂಭವಾಗಿದೆ. ಕೇವಲ ಸಾರ್ವಜನಿಕರಿಂದ ಕೆರೆ ಒತ್ತುವರಿಯಾಗಿದ್ದರೆ ತೆರವುಗೊಳಿಸಬಹುದಿತ್ತು. ಆದರೆ, ಇಲ್ಲಿ ನಗರಸಭೆಯೇ ಈ ಕಾರ್ಯಕ್ಕೆ ಮುಂದಾಗಿದೆ. ಕೆರೆಯ ಒಂದು ಭಾಗದಲ್ಲಿ ನಿರಂತರವಾಗಿ ತ್ಯಾಜ್ಯ ವಸ್ತುಗಳನ್ನು ತಂದು ರಾಶಿ ಹಾಕುತ್ತಿದೆ. ಇದರಿಂದ ಕೆರೆ ವಿಸ್ತಾರ ಕಡಿಮೆಯಾಗುತ್ತಿದೆ. ಗಿಡ-ಗಂಟಿಗಳು ಬೆಳೆದು ನಿಂತಿದ್ದರೂ ನಗರಸಭೆ ಮಾತ್ರ ಕೆರೆ ಅಭಿವೃದ್ಧಿಯತ್ತ ಗಮನ ನೀಡುತ್ತಿಲ್ಲ. ತಾನು ಕಸ ಎಸೆಯುವುದನ್ನೂ ನಿಲ್ಲಿಸಿಲ್ಲ.
ಅಸಮಾಧಾನ
ಮುಲ್ಲಾನ ಕೆರೆ ಅತಿಕ್ರಮಣವಾಗುತ್ತಿರುವ ಬಗ್ಗೆ ಸ್ಥಳೀಯರು ಅನೇಕ ಬಾರಿ ನಗರಸಭೆ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಗ್ರಾಹಕ ಹಿತರಕ್ಷಕ ಸಂಘವಂತೂ ಮುಲ್ಲಾನ ಕೆರೆ ರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಿದೆ. ನಗರಸಭೆಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕೆರೆ ರಕ್ಷಿಸುವಂತೆ ಮನವಿ ಮಾಡಿಕೊಂಡಿದೆ. ನಂತರ ಕೆರೆ ರಕ್ಷಣೆ ಹಾಗೂ ಅತಿಕ್ರಮಣ ತೆರವಿಗೆ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಯವರು ನಗರಸಭೆಗೆ ಸೂಚಿಸಿ ನೋಟಿಸ್ ನೀಡಿದ್ದರು. ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ನಂತರ ಏನಾಯಿತು ಎಂಬುದು ಗೊತ್ತಾಗಲೇ ಇಲ್ಲ.

ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement