ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೋವಿನಜೋಳ ದಾಸ್ತಾನಿಗೆ ಉಗ್ರಾಣ ವ್ಯವಸ್ಥೆ: ಬಣಕಾರ

Mainashree
Updated On : 25 Nov 2013, 11:07 am

ಹಿರೇಕೆರೂರು: ರೈತರಿಂದ ಖರೀದಿಸಿದ ಗೋವಿನಜೋಳ ದಾಸ್ತಾನು ಮಾಡಲು ಪಟ್ಟಣದಲ್ಲಿ ಗೋದಾಮು ಕೊರತೆಯಿದೆ. ಉಗ್ರಾಣದ ತೊಂದರೆ ಇದೇ ಎಂದು ಖರೀದಿ ನಿಲ್ಲಿಸದೆ ಬಸರಿಹಳ್ಳಿ ಗ್ರಾಮದ ಹತ್ತಿರ ಎನ್‌ಆರ್‌ಇಜಿ ಯೋಜನೆಯಲ್ಲಿ ಬೃಹತ್ ಉಗ್ರಾಣ ನಿರ್ಮಿಸುವುದಾಗಿ ಶಾಸಕ ಯು.ಬಿ. ಬಣಕಾರ ಭರವಸೆ ನೀಡಿದರು.
ಪಟ್ಟಣ ಎಪಿಎಂಸಿ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಶ್ರಯದ ಗೋವಿನ ಜೋಳ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಅವರು, ಈ ಮಾರುಕಟ್ಟೆ ರಾಜ್ಯದಲ್ಲಿಯೇ ಅತಿ ಸೂಕ್ಷ್ಮ ಕೇಂದ್ರ. ಈ ಹಿಂದೆ ರೈತರಿಂದ ಗೋವಿನ ಜೋಳ ಖರೀದಿಸಿ ಸಂಗ್ರಹಿಸಲು ಅಡಚಣೆಗಳು ಇದ್ದವು. ಹೀಗಾಗಿ, ಉಗ್ರಾಣದ ವ್ಯವಸ್ಥೆ ಕಲ್ಪಿಸಬೇಕು. ಬೆಂಬಲ ಬೆಲೆಯಲ್ಲಿ ರೈತರಿಂದ ಗೋವಿನ ಜೋಳ ಖರೀದಿಸುವ ಪ್ರಕ್ರಿಯೆ ನ್ಯೂನತೆಗಳನ್ನು ಸರಿಪಡಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ತಾಲೂಕಿನ ರೈತರಿಗೆ ತಾವು ಬೆಳೆದ ಗೋವಿನಜೋಳವನ್ನು ರ್ಸರದ ಬೆಂಬಲ ಬೆಲಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ಪಟ್ಟಣದ ಎಪಿಎಂಸಿಯಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ರೈತರು ಗೋವಿನ ಜೋಳವನ್ನು ಮಧ್ಯವರ್ತಿಗಳಿಗೆ ಮಾರದೆ, ಸ್ಥಳೀಯ ಮಾರಾಟ ಕೇಂದ್ರದಲ್ಲಿ ವಿಕ್ರಯಿಸಿ, ಲಾಭ ಪಡೆಯುವಂತೆ ಬಣಕಾರ ತಿಳಿಸಿದರು.
ತಹಸೀಲ್ದಾರ್ ಶಕುಂತಲಾ ಚೌಗುಲೆ ಮಾತನಾಡಿ, ಅತಿವೃಷ್ಟಿಯಿಂದ ತಾಲೂಕಿನಲ್ಲಿ ಗೋವಿನ ಜೋಳ ಬೆಳೆ ಹಾನಿಯಾಗಿದೆ. ಉಳಿದ ಬೆಳೆಯನ್ನು ಮಾರಾಟ ಮಾಡುವಾಗ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಸರ್ಕಾರ ಸ್ಥಾಪಿಸಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಪಿ. ಸೇವಾ ನಾಯ್ಕ ಮಾತನಾಡಿ, ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಗೋವಿನ ಜೋಳ ಬೆಳೆಯಲಾಗಿದೆ. ಅತಿವೃಷ್ಟಿಯಿಂದಾಗಿ ಇಳುವರಿ ಕುಂಠಿತವಾಗಿದೆ ಎಂದರು.
ಅವೈಜ್ಞಾನಿಕ ಖರೀದಿ
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಠಿಣ ನಿಯಮಗಳನ್ನು ಜಾರಿಗೆ ತಂದು ರೈತರ ಗೋವಿನ ಜೋಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ಆರಂಭ ಮಾಡಿರುವುದಕ್ಕೆ ರಾಜ್ಯ ರೈತ ಸಂಘ ತೀವ್ರ ವಿಷಾದ ವ್ಯಕ್ತಪಡಿಸಿದೆ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರಾಜ್ಯ ಸರ್ಕಾರ ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಸ್ಥಾಪಿಸಿದ್ದು, ರೈತರಿಂದ ಗೋವಿನಜೋಳ ಖರೀದಿಸಿಲು ಕೆಲವು ಷರತ್ತುಗಳನ್ನು ವಿಧಿಸಿದೆ. ಹೀಗಾಗಿ, ಇದು ರೈತರಿಗೆ ವರದಾನವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಮಾತ್ರ 25 ಕ್ವಿಂಟಲ್ ಗೋವಿನ ಜೋಳವನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬಹುದು ಎಂದು ತಿಳಿಸಿದೆ. ಇದು ಆವೈಜ್ಞಾನಿಕ ಎಂದು ಕಿಡಿಕಾರಿದರು.
ಎಪಿಎಂಸಿ ಅಧ್ಯಕ್ಷ ಪರ್ವತಪ್ಪ ಅಜಗೋಳ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಉಪಾಧ್ಯಕ್ಷ ನಾಗರಾಜ ಬೆನಕಣ್ಣನವರ, ಸದಸ್ಯರಾದ ಗದಿಗೆಪ್ಪ ನಾಗಣ್ಣನವರ, ಚಂದ್ರಶೇಖರ ಬಾಳಿಕಾಯಿ, ವೀರಬಸಪ್ಪ ಮತ್ತೂರ, ಪಿ,ಡಿ, ದೊಡ್ಮನಿ, ಮೋಹನಗೌಡ ಪಾಟೀಲ, ಪಪಂ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಎಪಿಎಂಸಿ ಕಾರ್ಯದರ್ಶಿ ಪಿ, ರಾಮಪ್ಪ, ವ್ಯವಸ್ಥಾಪಕ ಬಿ.ಎಂ. ಪರಮೇಶ್ವರಯ್ಯ, ಮೋಹನ ಬಾರ್ಕಿ, ನಿಗಮದ ಸಿಬ್ಬಂದಿ, ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement