ನಂಬಿಕೆ, ಆಚರಣೆ ಮೌಢ್ಯವಲ್ಲ: ಸದಾಶಿವ ಶ್ರೀ
ಬ್ಯಾಡಗಿ: ದೇವರ ಮೇಲಿನ ನಂಬಿಕೆ ಮತ್ತು ಆಚರಣೆಗಳನ್ನು ಸಾಮಾಜಿಕ ಮೌಢ್ಯಗಳೆಂದು ಭಾವಿಸುವುದು ತಪ್ಪು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ನೆಹರು ನಗರದಲ್ಲಿನ ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿ ಧಾರ್ಮಿಕ ತಳಹದಿ ಮೇಲೆ ಉತ್ತಮ ಚಾರಿತ್ರ್ಯ ಹೊಂದಿರುವ ದೇಶಗಳೂ ಬಹಳಷ್ಟು ಸಮೃದ್ಧಿಯಾಗಿವೆ. ತಾತ್ಕಾಲಿಕ ಸುಖದೆಡೆಗೆ ಮುಖ ಮಾಡಿರುವ ಜನರು ಧಾರ್ಮಿಕ ನಂಬಿಕೆ ಹಾಗೂ ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿದ್ದು, ಇದರಿಂದ ನೈತಿಕವಾಗಿ ದುರ್ಬಲರಾಗುತ್ತಿದ್ದೇವೆ ಎಂದರು.
ದೇವಾಲಯಗಳು ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿದ್ದು, ಧರ್ಮ ಹಾಗೂ ಸಂಸ್ಕೃತಿ ಮುಂದುವರಿಸುವಲ್ಲಿ ಅವುಗಳ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬರೂ ದೇವರನ್ನು ಪ್ರಾರ್ಥಿಸುವುದು ಸಾಮಾನ್ಯ. ಆದರೆ, ಪ್ರಾಣಿಬಲಿ, ನರಬಲಿ, ಬೆತ್ತಲೆ ಸೇವೆಯಂತಹ ಕೆಲ ಮೌಢ್ಯಗಳು ಪ್ರಚಲಿತದಲ್ಲಿದ್ದು, ಸರ್ಕಾರ ಕಠಿಣ ಕಾನೂನುಗಳ ಮೂಲಕ ಅಂತಹವುಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸುರೇಶಗೌಡ, ಆರ್ಥಿಕವಾಗಿ ನಾವು ಎಷ್ಟೇ ಪ್ರಬಲವಾಗಿದ್ದರೂ ನೆಮ್ಮದಿ ಹಾಗೂ ಸಾರ್ಥಕ ಬದುಕಿಗೆ ಧಾರ್ಮಿಕ ನೆಲೆ ಕಂಡುಕೊಳ್ಳಬೇಕಾಗಿದೆ ಎಂದರು.
ವೈಚಾರಿಕತೆ ಹಾಗೂ ವಿಶಾಲ ಮನೋಭಾವ ಕೊರತೆಯಿಂದ ಪ್ರಸಿದ್ಧ ದೇವಾಲಯಗಳನ್ನು ಪ್ರತ್ಯೇಕ ಜಾತಿ ಹಾಗೂ ಧರ್ಮಗಳಿಗೆ ಮೀಸಲಿಡಲಾಗಿದೆ ಎಂದು ವಿಷಾದಿಸಿದ ಅವರು, ಇಂತಹ ಸಂಕುಚಿತ ಮನೋಭಾವದಿಂದ ಎಲ್ಲರೂ ಹೊರ ಬರುವಂತೆ ಮನವಿ ಮಾಡಿದರು.
ಪುಟ್ಟರಾಜ ಗವಾಯಿಗಳ ಶಿಷ್ಯರಾದ ಇಳಕಲ್ ತಾಲೂಕು ಗುಡೂರಿನ ಶಾಂತಾನಂದ ಗವಾಯಿಗಳು ದಾನಮ್ಮದೇವಿ ಪುರಾಣ ಪ್ರಾರಂಭಿಸಿದರು. ಡಾ. ಎಸ್.ಎನ್. ನಿಡಗುಂದಿ ಪ್ರಾಸ್ತಾವಿಕ ಮಾತನಾಡಿದರು,
ವೇದಿಕೆಯಲ್ಲಿ ವೇ. ರಾಚಯ್ಯ ಓದಿಸೋಮಠ, ಮಹಾದೇವಪ್ಪ ದೇಸೂರು, ವಿ.ವಿ. ದ್ಯಾವಕ್ಕಳವರ, ಎಲ್.ಎಂ.ಪಾಟೀಲ್, ಎಸ್.ಎಸ್. ಹಿರೇಮಠ, ಜಯಣ್ಣ ಕಬ್ಬೂರ, ಚಂದ್ರಣ್ಣ ಶೆಟ್ಟರ್, ಗಂಗಣ್ಣ ಎಲಿ, ಮುತ್ತಣ್ಣ ಪಾಟೀಲ, ಕುಮಾರಗೌಡ ಪಾಟೀಲ ಇನ್ನಿತರರಿದ್ದರು.
ವಾಗ್ದೇವಿ ಸಂಗೀತ ಶಾಲೆಯ ಹೇಮಾ ಜೋಯಿಸ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಪ್ರಕಾಶ ಕುಂಚೂರ ಸ್ವಾಗತಿಸಿದರು. ರಾಜು ಮೋರಿಗೇರಿ ವಂದಿಸಿದರು.