ಮಹಿಳೆ ಸ್ವಾವಲಂಬಿಯಾಗಲಿ: ಶೆಟ್ಟರ್
ಬ್ಯಾಡಗಿ: ಕುಟುಂಬ ನಿರ್ವಹಣೆಯ ಅಧಾರವಾಗಿರುವ ಮಹಿಳೆಗೆ ಶಿಕ್ಷಣ, ಉದ್ಯೋಗ ಸೌಲಭ್ಯ ಒದಗಿಸುವ ಮೂಲಕ ಸ್ವಾವಲಂಬಿ ಬದುಕು ನಡೆಸಲು ಅವಕಾಶ ಮಾಡಿಕೊಡುವಂತೆ ಮುರಿಗೆಪ್ಪ ಶೆಟ್ಟರ ಕರೆ ನೀಡಿದರು.
ಆದರ್ಶ ಶಿಕ್ಷಣ ಸಂಸ್ಥೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿದ ಅವರು, ಮಹಿಳೆ ಬೇರೊಬ್ಬರ ಅಡಿಯಾಳಾಗಿ ಜೀವಿಸುವುದು ಮುಗಿದ ಅಧ್ಯಾಯ. ಕುಟುಂಬದ ಸದಸ್ಯರೆಲ್ಲರೂ ದುಡಿದರೂ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಹಿಳೆ, ಅಡುಗೆ ಮನೆಯಿಂದ ಹೊರಬರಬೇಕಿದೆ ಎಂದರು.
ಉಪನ್ಯಾಸಕಿ ರೂಪಾ ಸಜ್ಜನ, ಮಹಿಳಾ ಸ್ವಾತಂತ್ರ್ಯ ಈಗ ಹೆಚ್ಚು ಚರ್ಚಿತ ವಿಷಯ. ಸ್ವೇಚ್ಛಾಚಾರದ ನೆಪದಲ್ಲಿ ಮಹಿಳೆ ಮನ ಬಂದಂತೆ ಜೀವಿಸುವುದು ತಪ್ಪು. ಶಿಕ್ಷಣ, ಉದ್ಯೋಗ, ಜೀವನ ಕೌಶಲ ರೂಢಿಸಿಕೊಂಡರೆ, ಮುಂದಿನ ಪೀಳಿಗೆ ಸುಖವಾಗಿರಬಲ್ಲದು ಎಂದರು. ಯೋಜನಾಧಿಕಾರಿ ಗಣೇಶ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಸಂಧ್ಯಾರಾಣಿ ದೇಶಪಾಂಡೆ, ಫರೀದಾಬಾನು ನದೀಮುಲ್ಲಾ ಇದ್ದರು.