ಮಾಹಿತಿಯಿಲ್ಲದೆ ಕೃಷಿ ಸೊರಗಿದೆ: ಸುಜಾತಾ
ಶಿಗ್ಗಾಂವಿ: ವೈಜ್ಞಾನಿಕ ಮಾಹಿತಿಯ ಕೊರತೆಯಿಂದಾಗಿ ಕೃಷಿ ಮತ್ತು ಹೈನುಗಾರಿಕೆ ನಶಿಸುತ್ತಿದ್ದು, ರೈತ ಕುಟುಂಬಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತಿಲ್ಲ. ಬೀಜಗಳ ಗುಣಮಟ್ಟ, ಅಧಿಕ ಪ್ರಮಾಣದ ರಸಗೊಬ್ಬರ ಬಳಕೆ, ಮಣ್ಣಿಗೆ ತಕ್ಕಂತೆ ಬೆಳೆ ಬೆಳೆಯದೇ ಇರುವುದು ಕೃಷಿ ಕುಗ್ಗಲು ಕಾರಣ ಎಂದು ತಾಪಂ ಅಧ್ಯಕ್ಷೆ ಸುಜಾತಾ ಎಸ್. ಕಲಕಟ್ಟಿ ಹೇಳಿದರು.
ತಾಲೂಕಿನ ಮುಗಳಿಕಟ್ಟಿ ಗ್ರಾಮದಲ್ಲಿ ನಡೆದ ಕೃಷಿ ಮತ್ತು ಹೈನುಗಾರಿಕೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ರೈತರು ತಾಂತ್ರಿಕವಾಗಿ ತಿಳಿದುಕೊಂಡು ಕೃಷಿಯ ಜತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.
ಸಹಾಯಕ ಕೃಷಿ ಅಧಿಕಾರಿ ಜಿ.ಪಿ. ಕಳ್ಳಿಮನಿ ಕೃಷಿ ಮಾಹಿತಿ ನೀಡಿದರು. ಕೆಎಂಎಫ್ ವ್ಯವಸ್ಥಾಪಕ ಬಾರಂಗಿ ಮಾತನಾಡಿ, ಲಾಭದಾಯಕ ಹೈನುಗಾರಿಕೆ ಬಗ್ಗೆ ಉತ್ತಮ ತಳಿಯ ಆಯ್ಕೆ, ವೈಜ್ಞಾನಿಕ ರೀತಿಯ ಕೊಟ್ಟಿಗೆ ನಿರ್ಮಾಣ, ಸಮತೋಲನ ಆಹಾರ, ಹಸಿರು ಹುಲ್ಲು, ರೋಗ ನಿಯಂತ್ರಕ ಲಸಿಕೆ ಹಾಕಿಸುವುದರ ಮೂಲಕ ಲಾಭದಾಯಕ ಹೈನುಗಾರಿಕೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಣಪತಿ ಮಾಳಂಜಿ ಪ್ರಾಸ್ತಾವಿಕ ಮಾತನಾಡಿದರು. ಹೈನುಗಾರಿಕೆ ಅಧಿಕಾರಿ ಪ್ರವೀಣ್ ದೊಡಮನಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ವಿಶ್ವನಾಥ ನಿರೂಪಿಸಿದರು, ಗದಿಗೆಪ್ಪ ಹೆಳವರ್ ವಂದಿಸಿದರು.