ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾವೇರಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ

Mainashree
Updated On : 25 Nov 2013, 11:07 am

ಕನ್ನಡಪ್ರಭ ವಾರ್ತೆ, ಹಾವೇರಿ, ನ. 24
ಜಿಲ್ಲಾ ಕೇಂದ್ರದ ನೂತನ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಶಾಸಕ ರುದ್ರಪ್ಪ ಲಮಾಣಿ ಭಾನುವಾರ ಚಾಲನೆ ನೀಡಿದರು.
ಒಂದುವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಬಸ್ ನಿಲ್ದಾಣ ಕಾಮಗಾರಿಗೆ ಕೊನೆಗೂ ಚಾಲನೆ ಸಿಕ್ಕಿದೆ. ಕುಮಾರಪಟ್ಟಣಂನ ಮೈಕಾನ್ ಕನ್‌ಸ್ಟ್ರಕ್ಷನ್ ಕಂಪನಿ ಕಾಮಗಾರಿ ನಿರ್ವಹಿಸಲಿದೆ.
ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಲಮಾಣಿ, ಉಸುಕಿನ ತೊಂದರೆಯಿಂದಾಗಿ ಕಾಮಗಾರಿಯನ್ನು ಮುಂದೂಡುತ್ತಾ ಬಂದಿದ್ದೆವು. ಈಗ ಸಮಸ್ಯೆ ಬಗೆಹರಿದಿದ್ದರಿಂದ ಚಾಲನೆ ನೀಡಿದ್ದೇವೆ. 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಿದ್ದು, 2015ರ ಮಾರ್ಚ್ ಅಂತ್ಯದೊಳಗೆ ನಿಲ್ದಾಣ ಬಳಕೆಗೆ ಸಿಗಲಿದೆ. ಐದು ಎಕರೆ ಪ್ರದೇಶದಲ್ಲಿ ಅಂದಾಜು ರು. 6.50 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಮುಂಭಾಗದಲ್ಲಿ ಮಳಿಗೆ, ಹಿಂಭಾಗದಲ್ಲಿ ನಿಲ್ದಾಣವಿರಲಿದೆ. ಹಾನಗಲ್ ರಸ್ತೆಯಲ್ಲಿ 10 ಮಳಿಗೆಗಳು ಹಾಗೂ ಪಿಬಿ ರಸ್ತೆಯಲ್ಲಿ 5 ಮಳಿಗೆಗಳ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ಐದು ಕಡೆಗಳಲ್ಲಿ ನಿಲ್ದಾಣ ದ್ವಾರಗಳಿರುತ್ತವೆ. ಒಟ್ಟು 25 ಪ್ಲಾಟ್ ಫಾರಮ್ ನಿರ್ಮಿಸಲಾಗುವುದು. ಮೂಲನಕ್ಷೆಯಂತೆಯೇ ಕಾಮಗಾರಿ ನಡೆಯಲಿದೆ. ನಿಲ್ದಾಣ ಯಾತ್ರಿನಿವಾಸವನ್ನೂ ಹೊಂದಿರಲಿದೆ. ವಿಜಾಪುರ ನಿಲ್ದಾಣ ಮಾದರಿಯಲ್ಲಿ ಕಾಮಗಾರಿ ನಡೆಯಲಿದೆ ಎಂದರು.
ತಮ್ಮ ತಂದೆಯವರು ಮೇಸ್ತ್ರಿಯಾಗಿದ್ದ ಮೈಕಾನ್ ಕನ್‌ಸ್ಟ್ರಕ್ಷನ್ ಕಂಪನಿಯವರೇ ಗುತ್ತಿಗೆ ಪಡೆದಿದ್ದಾರೆ. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುತ್ತಾರೆಂಬ ವಿಶ್ವಾಸವಿದೆ. ಹಾವೇರಿಯ ಡಿಪೋ ಕಾಮಗಾರಿ ಸದ್ಯದಲ್ಲಿ ಆರಂಭವಾಗಲಿದೆ. ಕಾರ್ಮಿಕರು ಸ್ಥಳ ಪರಿಶೀಲಿಸಿದ್ದಾರೆ ಎಂದರು.
ಸೈಟ್ ಎಂಜಿನಿಯರ್ ಮಂಜುನಾಥ, ಸಾರಿಗೆ ಸಂಸ್ಥೆಯ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಎಸ್.ವಿ.ಅಂಗಡಿ, ನಗರಸಭೆ ಅಧ್ಯಕ್ಷ ಐ.ಯು. ಪಠಾಣ್, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement