ಹಾವೇರಿ: ಹದಗೆಟ್ಟಿದೆ ಚರಂಡಿ ವ್ಯವಸ್ಥೆ
ಹಾವೇರಿ ನಗರದ 31 ವಾರ್ಡ್ಗಳಲ್ಲಿಯೂ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ತೆರೆದ ಚರಂಡಿ ತುಂಬ ಹೂಳು, ಕಸ-ಕಡ್ಡಿ ತುಂಬಿ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಇದರಿಂದ ಇಡೀ ನಗರದ ಪರಿಸರವೇ ಹಾಳಾಗಿದ್ದು, ದುರ್ನಾತ ಬೀರುತ್ತಿದೆ.
ನಗರಸಭೆಯಿಂದ ಸಮರ್ಪಕ ಚರಂಡಿ ವ್ಯವಸ್ಥೆ ಆಗಬೇಕಿದೆ. ಪೈಪ್ಲೈನ್, ರಸ್ತೆ ನಿರ್ಮಾಣ ಹಾಗೂ ಕೆಲ ಖಾಸಗಿಯವರು ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಚರಂಡಿಯಲ್ಲೇ ಮಣ್ಣು ಹಾಕುತ್ತಿದ್ದಾರೆ. ಇದರಿಂದ ಸರಾಗವಾಗಿ ತ್ಯಾಜ್ಯ ನೀರು ಹರಿದುಹೋಗುತ್ತಿಲ್ಲ. ಪೌರ ಕಾರ್ಮಿಕರು ಅಷ್ಟಿಷ್ಟು ಕೆಲಸ ಮಾಡಿದರೂ ಅದು ಕಣ್ಣಿಗೆ ಕಾಣುತ್ತಿಲ್ಲ. ಪ್ಲಾಸ್ಟಿಕ್ ಚೀಲಗಳು ಚರಂಡಿಯಲ್ಲಿ ಕೊಳೆಯುತ್ತಿವೆ. ಹೋಟೆಲ್ಗಳ ತ್ಯಾಜ್ಯ ನೀರು ಹರಿದುಹೋಗಲು ಸ್ಥಳವಿಲ್ಲದೆ ಚರಂಡಿ ತುಂಬಿಕೊಳ್ಳುತ್ತಿದೆ. ಇದರಿಂದ ಸೊಳ್ಳೆ ಕಾಟವೂ ಅಧಿಕವಾಗಿದೆ. ಇದು ಸಾಂಕ್ರಾಮಿಕ ರೋಗ ಹರಡುವಿಕೆಗೂ ಕಾರಣವಾಗುತ್ತಿದೆ.
ಗಟಾರಗಳು ತುಂಬಿ ದುರ್ನಾತ ಬೀರುತ್ತಿದ್ದು, ಕೊಳಚೆ ನೀರು ಹರಿದುಹೋಗಲು ನಗರಸಭೆ ಸೂಕ್ತ ಚರಂಡಿ ನಿರ್ಮಿಸಬೇಕು. ಎಲ್ಲ ವಾರ್ಡುಗಳಲ್ಲಿ ಒಳಚರಂಡಿ ನಿರ್ಮಿಸಬೇಕು. ತುಂಬಿರುವ ಗಟಾರಗಳನ್ನು ಸ್ವಚ್ಛಗೊಳಿಸಬೇಕು. ಒಳಚರಂಡಿ ಯೋಜನೆಯಲ್ಲಿ ಕೆಲ ಭಾಗಗಳನ್ನು ಬಿಟ್ಟಿದ್ದು, ಅವುಗಳನ್ನೂ ಸೇರಿಸಿಕೊಳ್ಳಬೇಕು. ಕಳಪೆ ಕಾಮಗರಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಸ್ವಚ್ಛ ನಗರವನ್ನಾಗಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು. ಪಕ್ಕಾ ಗಟಾರ ಹಾಗೂ ಸಿಡಿ ನಿರ್ಮಿಸಬೇಕು.
- ವೈ.ಐ. ಮಡಿವಾಳರ
ಬಸವೇಶ್ವರ ನಗರ, ಹಾವೇರಿ