ಯುವ ಜನತೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಲಿ: ಮಜೀದ್
ಹಾವೇರಿ: ಸಮೃದ್ಧ ರಾಷ್ಟ್ರ ಹಾಗೂ ಜಾತ್ಯತೀತ ಸಮಾಜ ನಿರ್ಮಾಣ ಯುವ ಜನರಿಂದ ಮಾತ್ರ ಸಾಧ್ಯ. ಯುವಜನತೆ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕು. ಜಗತ್ತಿನಲ್ಲಿ ಅತಿ ಹೆಚ್ಚು ಶೇ. 60ರಷ್ಟು ಯುವ ಜನರನ್ನು ಹೊಂದಿರುವ ದೇಶ ಭಾರತ ಎಂದು ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಎಸ್.ಎಚ್. ಮಜೀದ್ ಹೇಳಿದರು.
ನೆಹರೂ ಯುವ ಕೇಂದ್ರ, ಜನವಿಕಾಸ ಪ್ರತಿಷ್ಠಾನ, ಜೈಹಿಂದ್ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವಕ ಸಂಘ ಕರೂರ, ಬನಶಂಕರಿ ಕ್ರೀಡಾ ಸಂಘ, ಹೊಳೆಆನ್ವೇರಿ ಆಶ್ರಯದಲ್ಲಿ ಏರ್ಪಡಿಸಿದ್ದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಸಮಾಜದ ಜನರ ಕಷ್ಟಗಳಿಗೆ ಸಹಕರಿಸಬೇಕು. ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು. ಸ್ವಾವಲಂಬನೆ ಇಲ್ಲದವನಿಗೆ ಜಗತ್ತಿನ ಸಂಪತ್ತನ್ನು ಕೊಟ್ಟರೂ ವ್ಯರ್ಥ. ಸಮುದ್ರದ ಅಲೆಗಳಂತೆ ಕಷ್ಟ-ಸುಖಗಳು ಹರಿದು ಬರುತ್ತವೆ. ಎಲ್ಲವನ್ನು ನಿಭಾಯಿಸುವ ಶಕ್ತಿ ಒಗ್ಗೂಡಿಸಿಕೊಳ್ಳಬೇಕು. ಮಾನವಿಯ ಮೌಲ್ಯ ಹಾಗೂ ನಾಯಕತ್ವದ ಗುಣ ಬೆಳೆಸಿಕೊಂಡು ಸದೃಢ ರಾಷ್ಟ್ರ ಕಟ್ಟಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜನವಿಕಾಸ ಪ್ರತಿಷ್ಠಾನದ ಅಧ್ಯಕ್ಷೆ ಗೀತಾ ಪಾಟೀಲ್ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ರಾಣೇಬೆನ್ನೂರಿನ ಪುಟ್ಟಯ್ಯನವರ ಮಠದ ಗುರುಬಸವ ಸ್ವಾಮೀಜಿ, ದುಷ್ಚಟಗಳಿಗೆ ಯುವ ಶಕ್ತಿ ಬಲಿಯಾಗದೆ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಸಮತೋಲನ ಹೊಂದಬೇಕು ಎಂದರು. ರಾಜಪ್ಪ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವೇರಿ ಪ್ರಾರ್ಥಿಸಿದರು. ಜಮಾಲಸಾಬ ತಾವರಗುಂದಿ ಸ್ವಾಗತಿಸಿದರು. ಚನ್ನವೀರಮ್ಮ ನಿರೂಪಿಸಿ, ರವೀಂದ್ರ ಆರ್.ಕೆ. ವಂದಿಸಿದರು.