ಶಿಕ್ಷಕರ ಸಂಘಕ್ಕೆ ನೋಂದಣಿ: ಮನವಿ
ರಾಣಿಬೆನ್ನೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಸದಸ್ಯರಾಗಲು ಶಿಕ್ಷಕರು ಉತ್ಸುಕತೆ ತೋರುತ್ತಿದ್ದಾರೆ ಎಂದು ರಾಜ್ಯಾಧ್ಯಕ್ಷ ಮಂಜುನಾಥ ಎಚ್.ಕೆ. ತಿಳಿಸಿದರು. ಸೋಮವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮೂಲಕ ಸಂಘದ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ರಾಜ್ಯ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಿಕ್ಷಕರು ಈ ತಿಂಗಳ ಅಂತ್ಯದೊಳಗೆ ತಮ್ಮ ಹೆಸರನ್ನು ತಾಲೂಕು ಅಥವಾ ಜಿಲ್ಲಾಧ್ಯಕ್ಷರ ಬಳಿ ನೋಂದಾಯಿಸಬೇಕೆಂದು ಮನವಿ ಮಾಡಿದರು. ಪ್ರೌಢಶಾಲೆಗಳ ಸಹ ಶಿಕ್ಷಕರು ಎದುರಿಸುತ್ತಿರುವ ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೊರಾಟಕ್ಕೆ ಸ್ಪಂದಿಸಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ, ಸರ್ಕಾರಕ್ಕೆ ನೀಡಿರುವ ವರದಿ ಆಧಾರದಲ್ಲಿ ರು. 19ರಿಂದ 36 ಸಾವಿರ ವರೆಗೆ ಮೂಲವೇತನ ನೀಡುವಂತೆ ಒತ್ತಾಯಿಸಿ ರಾಜ್ಯ ಸಂಘ ಹೋರಾಟ ನಡೆಸಿದೆ. ಪ್ರೌಢಶಾಲಾ ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ಜಾರಿಗೆ ತಂದಿರುವ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಪದ್ಧತಿಯಲ್ಲಿರುವ ನ್ಯೂನತೆ ಸರಿಪಡಿಸಬೇಕೆಂದು ಆಗ್ರಹಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಧೆಗಳ ಶಿಕ್ಷಕರಿಗೆ ಕನ್ನಡ ವಿಶೇಷ ಬಡ್ತಿ, ಕಾಲ್ಪನಿಕ ಬಡ್ತಿ, ಆರೋಗ್ಯ ವಿಮೆಯನ್ನು ಸರ್ಕಾರಿ ಶಾಲಾ ಶಿಕ್ಷಕರ ಮಾದರಿಯಲ್ಲೇ ನೀಡಬೇಕು. ಮಕ್ಕಳ ಮತ್ತು ತರಗತಿ ಅನುಪಾತವನ್ನು 70 : 1ರಿಂದ 40 : 1ಕ್ಕೆ ಕಡಿತಗೊಳಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಗೌಡರ, ಸಂಘಟನಾ ಕಾರ್ಯದರ್ಶಿ ಲಿಂಗರಾಜು ಬಿ., ಖಜಾಂಚಿ ರಾಜಶೇಖರ ಬಿ.ಆರ್., ಸರ್ಕಾಞಜಿ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಹೋರಾಟಕ್ಕೆ ಬಲ ನೀಡಬೇಕೆಂದು ಹೇಳಿದರು. ಹಾವೇರಿ ಜಿಲ್ಲಾ ಸಂಘದ ಅಧ್ಯಕ್ಷ ಜಿ.ಬಿ. ಮಾಸಣಗಿ, ಎಚ್.ಎಚ್. ಹಾಲಬಾವಿ, ಮಹೇಶಬಾಬು, ಸಣ್ಣಕ್ಕಿ ಇದ್ದರು.