ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 25
ಜನಪ್ರತಿನಿಧಿಗಳನ್ನು ಜಿಲ್ಲೆಯ ಅಧಿಕಾರಿಗಳು ನಿರ್ಲಕ್ಷ್ಯ ಭಾವನೆಯಿಂದ ನೋಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೆ ಅಗೌರವ ತೋರುತ್ತಿದ್ದಾರೆ. ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಾಮಾನ್ಯ ಸಭೆಯಲ್ಲಿ ಜರುಗಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜೇಂದ್ರ ಹಾವೇರಣ್ಣನವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಆರೋಪ ಮಾಡಿದರು. ಅಧಿಕಾರಿಗಳಿಂದ ಮೂರು ವರ್ಷಗಳ ಕಾಲ ಅವಮಾನ ಅನುಭವಿಸಿ ಸಾಕಾಗಿದೆ. ಬ್ಯಾಡಗಿ ತಾಲೂಕು ಮಟ್ಟದ ನಿರ್ಮಲ ಭಾರತ ಅಭಿಯಾನ ಯೋಜನೆಗೆ ಚಾಲನೆ ನೀಡುವಾಗ ಜಿಪಂ ಸದಸ್ಯರಿಗೆ ಆಹ್ವಾನ ನೀಡಲಿಲ್ಲ, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದರೆ ಜನತೆಗೆ ಏನು ಉತ್ತರ ನೀಡಬೇಕು? ಅಧಿಕಾರಿಗಳಿಂದ ಅವಮಾನ ಅನುಭವಿಸುವುದಕ್ಕಿಂತ ರಾಜಿನಾಮೆ ನೀಡುವುದೇ ಉತ್ತಮ ಎಂದು ಸದಸ್ಯ ಶಿವಕುಮಾರ ಮುದ್ದಪ್ಪಳವರ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸದಸ್ಯರಾದ ಸುಜಾತ ಕೊಟಗಿಮನಿ, ಪದ್ಮನಾಭ ಕುಂದಾಪುರ ಧ್ವನಿಗೂಡಿಸಿದರು. ಅಧಿಕಾರಿಗಳ ಕಾರ್ಯವೈಖರಿ ಸರಿಯಲ್ಲ. ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲು ಸಾಧ್ಯವಿಲ್ಲವೆಂದರೆ ಅಧಿಕಾರಿಗಳಿಂದ ಮತ್ತೇನು ಸಾಧ್ಯ ಎಂದು ಪ್ರಶ್ನಿಸಿದರು.
ಇಒಗಳ ಜವಾಬ್ದಾರಿ
ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಮಾತನಾಡಿ, ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಸದಸ್ಯರ ಹಕ್ಕು ಚ್ಯುತಿಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆಯಾಗಬೇಕು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು. ಇಒಗಳು ಆಯಾ ತಾಲೂಕುಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು. ನಿಯಮದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಸಕಾಲದಲ್ಲಿ ತಲುಪಿಸಬೇಕು ಎಂದು ಸೂಚಿಸಿದರು.
ಸಿಇಒ ಕೆ.ಬಿ. ಆಂಜನೆಪ್ಪ ಮಾತನಾಡಿ, ಇನ್ನು ಮುಂದೆ ಈ ರೀತಿ ಲೋಪ ಆಗದಂತೆ ನೋಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಮತ್ತೊಮ್ಮೆ ಉದ್ಘಾಟಿಸಿ
ಸದಸ್ಯ ಪದ್ಮನಾಭ ಕುಂದಾಪುರ ಮಾತನಾಡಿ, ಹಾನಗಲ್ಲ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಜಿಪಂ ಸದಸ್ಯರನ್ನು ಬಿಟ್ಟು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಂಗನವಾಡಿ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ. ಆ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿಗಳು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದ್ದಾರೆ. ಹೀಗೆ ಸರ್ಕಾರಿ ಕಟ್ಟಡವನ್ನು ಪಕ್ಷದ ವತಿಯಿಂದ ಉದ್ಘಾಟನೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು. ಮತ್ತೊಮ್ಮೆ ಆ ಕಟ್ಟಡವನ್ನು ಉದ್ಘಾಟಿಸಬೇಕು ಎಂದು ಒತ್ತಾಯಿಸಿದರು.
ಹಾನಗಲ್ಲ ತಾಲೂಕಿನ ಅನೇಕ ಗ್ರಾಪಂಗಳಲ್ಲಿ ಬಸವ ವಸತಿ ಯೋಜನೆಗೆ ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಬದಲು ಗ್ರಾಪಂ ಸದಸ್ಯರು ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಈ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಇಒ ನಿಗದಿತ ಕಾಲ ಮಿತಿಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಜಾಗೃತ ಸಮಿತಿಗೆ ನೀಡಬೇಕು. ಏನಾದರೂ ಅವ್ಯವಹಾರ ನಡೆದರೆ ತಾಪಂ ಇಒ ನೇರ ಹೊಣೆಗಾರರು ಎಂದು ಸಿಇಒ ಆಂಜನೆಪ್ಪ ಎಚ್ಚರಿಸಿದರು. ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ ಇದ್ದರು.