ಅಂಗವೈಕಲ್ಯ ಪಾಪಫಲವಲ್ಲ, ಶಾಪವೂ ಅಲ್ಲ: ಶಿವಣ್ಣನವರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 26
ಅಂಗವೈಕಲ್ಯ ಪೂರ್ವಜನ್ಮದ ಪಾಪದ ಫಲವೆಂಬ ಮೌಢ್ಯದಿಂದ ಸಾರ್ವಜನಿಕರು ಹೊರಬರಬೇಕೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ರೋಟರಿ ಸಂಸ್ಥೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಅವರು, ಅಂಗವಿಕಲರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅವರಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅಂಗವೈಕಲ್ಯ ದೌರ್ಬಲ್ಯವೆಂದು ಭಾವಿಸಿ, ಮಾನಸಿಕ ಖಿನ್ನತೆಗೆ ಒಳಗಾಗದೆ ಸಮಾಜದಲ್ಲಿ ಎಲ್ಲರಂತೆ ಬದುಕಬೇಕೆಂದು ಹೇಳಿದರು.
ವೈದ್ಯಕೀಯ ಕ್ಷೇತ್ರ ಮುಂದುವರಿದಿದೆ. ಅಂಧತ್ವ ನಿವಾರಣೆಗೆ ವಿನೂತನ ಮಾದರಿ ಚಿಕಿತ್ಸೆಗಳು ಲಭ್ಯ. ಸಂಘ-ಸಂಸ್ಥೆಗಳು ಉತ್ಸಾಹದಿಂದ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವ ಕಾರಣ ಸರ್ಕಾರದ ಮೇಲಿನ ಹೊಣೆ ಕೊಂಚ ಇಳಿದಿದೆ ಎಂದರು. ಜನರು ಸ್ವ-ಇಚ್ಛೆಯಿಂದ ನೇತ್ರದಾನ ಮಾಡಿ ಇನ್ನೊಬ್ಬರ ಬಾಳಿಕೆ ಬೆಳಕಾಗಬೇಕು. ಇದು ಪುಣ್ಯದ ಕಾರ್ಯ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಜೆ.ಎಚ್. ಪಾಟೀಲ ಮಾತನಾಡಿ, ಮನುಷ್ಯನ ದೇಹದಲ್ಲಿ ಕಣ್ಣು ಸೂಕ್ಷ್ಮವಾದ ಅಂಗ. ದೃಷ್ಟಿ ಹೀನತೆಯಿಂದ ವ್ಯಕ್ತಿ ವಿಶ್ವದ ನಿಜ ಅನುಭವ ಪಡೆಯಲು ಅಸಾಧ್ಯ. ಕಣ್ಣುಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕೆಂದರು. ಶಿಬಿರದಲ್ಲಿ ಒಟ್ಟು 270 ರೋಗಿಗಳು ಕಣ್ಣಿನ ತಪಾಸಣೆ ನಡೆಯಿತು. 70 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ತಾಪಂ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ವೈದ್ಯಾಧಿಕಾರಿಗಳಾದ ಪುಟ್ಟರಾಜ, ಪ್ರಕಾಶ ಭಸ್ಮೆ, ಪುರಸಭೆ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ನಜೀರ್ ಶೇಖ್, ರೋಟರಿ ಮಾಜಿ ಅಧ್ಯಕ್ಷ ಪರಶುರಾಮ ಮೇಲಗಿರಿ ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಡಾ ಸೌದಾಗರ ಸ್ವಾಗತಿಸಿ, ವಂದಿಸಿದರು.