ಅಧಿಕಾರಿಗಳ ಗೈರು: ಗರಂ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 26
ಸಭೆಗೆ ಗೈರು ಹಾಜರಾದ ಅಧಿಕಾರಿಗಳ ಧೋರಣೆಗೆ ತಾಲೂಕು ಪಂಚಾಯಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳವಾರ ಜರುಗಿತು. ಕಳೆದ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಉತ್ತರಿಸದ ಹಿನ್ನೆಲೆಯಲ್ಲಿ ಮತ್ತೆ ನೋಟಿಸ್ ನೀಡಲು ಸಭೆ ನಿರ್ಣಯ ಕೈಗೊಂಡಿತು.
ರಿಹಾನಾ ಚಾಂದ್ ಶೇಖ್ ಅಧ್ಯಕ್ಷತೆಯಲ್ಲಿ ಇಲ್ಲಿಯ ತಾಪಂ ಸಭಾಭವನದಲ್ಲಿ ಮಂಗಳವಾರ ಸಭೆ ಆರಂಭವಾಗುತ್ತಿದ್ದಂತೆಯೇ ಅಧಿಕಾರಿಗಳ ಗೈರುಹಾಜರಿ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೇ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಕಳೆದ ಸಭೆಯಲ್ಲಿ ಗೈರಾದ 14 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಉತ್ತರಿಸದ ಏಳು ಅಧಿಕಾರಿಗಳಿಗೆ ಎರಡನೇ ನೋಟೀಸ್ ನೀಡುವ ನಿರ್ಣಯ ಕೈಗೊಳ್ಳಲಾಯಿತು. ಗೈರಾಗುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸದಸ್ಯರು ಆಗ್ರಹಿಸಿದರು.
ಯುಟಿಪಿ, ಆರೋಗ್ಯ ಇಲಾಖೆ, ಎಪಿಎಂಸಿಗಳ ಅಧಿಕಾರಿಗಳು ತಮ್ಮ ಬದಲಿಗೆ ಕಚೇರಿ ಸಿಬ್ಬಂದಿಯನ್ನು ಸಭೆಗೆ ಕಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳ ಇಂಥ ಬೇಜವಾಬ್ದಾರಿ ಸಹಿಸಲು ಸಾಧ್ಯವಿಲ್ಲ ಎಂದು ಪಕ್ಷಭೇದ ಮರೆತು ಸದಸ್ಯರು ಎಚ್ಚರಿಸಿದರು.
ವರದಾ ನದಿಗೆ ನಿರ್ಮಿಸಲಾಗಿರುವ ಬಾಂದಾರುಗಳಿಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಿ ಸಕಾಲದಲ್ಲಿ ಗೇಟ್ ಹಾಕದಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಇಲಾಖಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸದಸ್ಯ ಚನ್ನಬಸಪ್ಪ ಅರಳಿ, ಅ. 20ರೊಳಗೆ ಬ್ಯಾರೇಜ್ಗಳು ಭರ್ತಿ ಆಗುತ್ತಿದ್ದವು. ಈ ಬಾರಿ ಇನ್ನೂ ನೀರು ತುಂಬಿಲ್ಲ. ಶಾಸಕರು ಎರಡು ಬಾರಿ ಹೇಳಿದರೂ ಅವರ ಮಾತಿಗೂ ಅಧಿಕಾರಿಗಳು ಕಿಮ್ಮತ್ತು ನೀಡಿಲ್ಲ. ಬೆಳೆ, ದನಕರುಗಳಿಗೆ ನೀರಿಲ್ಲ. ಮಳೆಗಾಲ ಮುಗಿಯೋದು ಯಾವಾಗ ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು.
ಗುತ್ತಲ ಗ್ರಾಮದಲ್ಲಿ ಓಣಿಗಳಲ್ಲಿ ಶೆಡ್ಗಳಲ್ಲಿ ಮೀನು, ಮಟನ್ ಮಾರಾಟ ಮಾಡಲಾಗುತ್ತದೆ. ಇದನ್ನು ತಪ್ಪಿಸಲು ಗ್ರಾಮದಲ್ಲಿ ಪ್ರತ್ಯೇಕ ಜಾಗವನ್ನು ತಾಪಂ ಅನುಮೋದನೆ ಪಡೆದುಕೊಂಡೇ ನೀಡಲಾಗಿದೆ. ಆದರೆ ಈ ಜಾಗದಲ್ಲಿ ಮೀನು ಹಾಗೂ ಮಟನ್ ಮಾರಾಟ ಮಾಡುತ್ತಿಲ್ಲ. ಮಾಂಸದ ಹಾಗೂ ಮೀನಿನ ಅಳಿದುಳಿದ ತುಂಡುಗಳನ್ನು ರಸ್ತೆಗಳ ಅಂಚಿನ ಗಟಾರದಲ್ಲಿ ಹಾಕುತ್ತಿರುವುದರಿಂದ ಗ್ರಾಮದಲ್ಲಿ ದುರ್ನಾತ ಬೀರುತ್ತಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸದಸ್ಯ ಪರಮೇಶ್ವರಪ್ಪ ಕುರವತ್ತಿಗೌಡರ ಎಚ್ಚರಿಸಿದರು. ಉಪಾಧ್ಯಕ್ಷ ಪ್ರಕಾಶ ಬಣಕಾರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹನುಮಂತವ್ವ ಬಂಡಿವಡ್ಡರ ಇದ್ದರು.
ವೇದಿಕೆ ಎದುರೇ ಧರಣಿ
ಗುತ್ತಲದ ಸರ್ಕಾರಿ ಆಸ್ಪತ್ರೆಯ ವೈದ್ಯರು ಅಮಾನತಾಗಿ ಎರಡೂವರೆ ವರ್ಷಗಳಾದರೂ ವಸತಿಗೃಹವನ್ನು ತೆರವುಗೊಳಿಸಿಲ್ಲ. ಈ ಕುರಿತಂತೆ ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಾಗ ಶಾಸಕರು ಪೊಲೀಸರ ಸಹಾಯದೊಂದಿಗೆ ವಸತಿಗೃಹವನ್ನು ತೆರವುಗೊಳಿಸುವಂತೆ ಹೇಳಿದ್ದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯ ಪರಮೇಶ್ವರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತೆರವುಗೊಳಿಸುವ ಆದೇಶದ ಕಾಗದ ಪತ್ರಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ ಅವರು, ವೇದಿಕೆ ಎದುರು ಧರಣಿ ಕುಳಿತರು. ಡಿಎಚ್ಒ ಕರೆಸುವಂತೆ ಪಟ್ಟು ಹಿಡಿದರು. ಇತರ ಸದಸ್ಯರು ಅವರ ಮನವೊಲಿಸಿ, ಧರಣಿ ಕೈ ಬಿಡುವಂತೆ ಮಾಡಿದರು.