ದೇವಸ್ಥಾನ ಭಕ್ತಿ, ಶಕ್ತಿ ಕೇಂದ್ರ: ಸದಾಶಿವ ಶ್ರೀ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 26
ದೇವಸ್ಥಾನಗಳು ಅಖಂಡ ಹಿಂದೂ ಸಮಾಜದ ಭಕ್ತಿ, ಶಕ್ತಿಯ ಕೇಂದ್ರಗಳೆಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅಕ್ಕಿಆಲೂರು ಚಂದ್ರಶೇಖರ ನಗರದ ಆಂಜನೇಯ ಸ್ವಾಮಿ ನೂತನ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಗೋಷ್ಠಿಯ ಸಾನ್ನಿಧ್ಯ ವಹಿಸಿದ್ದ ಅವರು, ಸನಾತನ ಹಿಂದೂ ಧರ್ಮ ಪ್ರಬುದ್ಧವಾಗಿದ್ದು, ಹಿಂದೂ ಸಂಸ್ಕೃತಿ, ಆಚಾರ-ವಿಚಾರ ವಿಶ್ವಮಾನ್ಯವಾಗಿದೆ. ದೇವಸ್ಥಾನಗಳು ಉತ್ತಮ ವ್ಯವಸ್ಥೆಯೊಂದಿಗೆ ಧರ್ಮ ಶ್ರದ್ಧೆಯನ್ನು ಬೆಳೆಸಬೇಕು. ಅಲ್ಲಿ ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ವಿಧಾನಗಳು ನಡೆಯಬೇಕು. ಆಗ ದೇವಸ್ಥಾನಗಳು ಶಾಂತಿ ನೀಡುವ ಕೇಂದ್ರಗಳಾಗುತ್ತವೆ ಎಂದರು.
ಎಲ್ಲರನ್ನೂ ಸಮಾನವಾಗಿ ಕಾಣಿ
ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಚಂಚಲವಾದ ಮನಸ್ಸಿನ ಮೇಲೆ ಹತೋಟಿ ಸಾಧಿಸಿ, ಧರ್ಮ ಮಾರ್ಗದಲ್ಲಿ ಸಚ್ಚಾರಿತ್ರ್ಯದ ಜೀವನ ನಡೆಸಬೇಕು. ಜಾತಿ, ಧರ್ಮ ಮೀರಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಕರೆ ನೀಡಿದರು.
ನೇತೃತ್ವ ವಹಿಸಿದ್ದ ಸ್ಥಳೀಯ ಮುತ್ತಿನಕಂತಿಮಠದ ನಿಯೋಜಿತ ಪೀಠಾಧ್ಯಕ್ಷ ಚಂದ್ರಶೇಖರ ದೇವರು ಮಾತನಾಡಿ, ತಾಯಿ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡುತ್ತಾಳೆ. ಆದರೆ, ಈಚಿನ ಶಿಕ್ಷಣ ಉದ್ಯೋಗ ಮತ್ತು ಹಣ ಗಳಿಕೆಯನ್ನೇ ಕೇಂದ್ರೀಕರಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಾವೇರಿ ಹಬಸೂರು ಬಣ್ಣದಮಠದ ಅಭಿನವ ರುದ್ರಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಎಂ. ಉದಾಸಿ, ಉದ್ಯಮಿ ಸಿ.ಸಿ. ಬೆಲ್ಲದ, ಜಿಪಂ ಸದಸ್ಯೆ ಗೀತಾ ಅಂಕಸಖಾನಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಕೃಷ್ಣ ಈಳಗೇರ, ಕಾಂಗ್ರೆಸ್ ನಗರಾಧ್ಯಕ್ಷ ಇಂದೂಧರ ಸಾಲಿಮಠ, ತಾಪಂ ಮಾಜಿ ಸದಸ್ಯ ಮೆಹಬೂಬಲಿ ಬ್ಯಾಡಗಿ, ಮುಖಂಡರಾದ ರಾಜಣ್ಣ ಅಂಕಸಖಾನಿ, ಶಶಿಧರ ಮುತ್ತಿನಕಂತಿಮಠ, ಲಲಿತಮ್ಮ ಮುತ್ತಿನಕಂತಿಮಠ, ಸಂಗಮೇಶ ಮುತ್ತಿನಕಂತಿಮಠ, ಜ್ಯೋತಿ ಮುತ್ತಿನಕಂತಿಮಠ, ಬಸವರಾಜ ಸಾಲಿಮಠ, ಶಂಭಯ್ಯ ಮಹಂತಿನಮಠ, ಜಹೀರ ಅಹ್ಮದ ಹಸನಾಬಾದಿ, ಕೃಷ್ಣ ಸವಣೂರ, ಚನ್ನಬಸವ ಕುಬಸದ, ಕೃಷ್ಣ ಅರ್ಕಸಾಲಿ, ಮೂರ್ತಿ ಅರ್ಕಸಾಲಿ, ವಿನಾಯಕ ಅರ್ಕಸಾಲಿ, ನೇಮಣ್ಣ ಸವಣೂರ, ಮಂಜುನಾಥ ಸಂಶಿ, ಸಿದ್ದು ಹುಡೇದ, ಜಿ.ಬಿ. ಕೋಟಿ ಉಪಸ್ಥಿತರಿದ್ದರು.
ಉಷಾ ಹಾಗೂ ಪಾರ್ವತಿ ಮುತ್ತಿನಕಂತಿಮಠ ಪ್ರಾರ್ಥಿಸಿದರು. ಗೌರಿ ಬೆಲ್ಲದ ಭಕ್ತಿಗೀತೆ ಹೇಳಿದರು. ಶಿಕ್ಷಕ ವಸಂತ ಚಿಕ್ಕಣ್ಣನವರ ಸ್ವಾಗತಿಸಿ, ನಿರೂಪಿಸಿದರು. ಶಾಂತಯ್ಯಶಾಸ್ತ್ರೀ ಹಿರೇಮಠ ವಂದಿಸಿದರು.