ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಾಲಿನ್ಯ: ನಲುಗಿದ ನಲವಾಗಲ ಗ್ರಾಮ

Lingaraj Badiger
Updated On : 27 Nov 2013, 11:15 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 26
ತಾಲೂಕಿನ ಗಡಿ ಅಂಚಿನಲ್ಲಿರುವ ಹರಿಹರ ಪಾಲಿಫೈಬರ್ಸ್ ಕಾರ್ಖಾನೆ ಹೊರಸೂಸುತ್ತಿರುವ ತ್ಯಾಜ್ಯದಿಂದ ಜಲ, ವಾಯು ಮಾಲಿನ್ಯ ಅನುಭವಿಸುತ್ತ, ತುಂಗಭದ್ರಾ ನದಿಯ ಪ್ರವಾಹಕ್ಕೆ ತುತ್ತಾಗಿ ಸ್ಥಳಾಂತರ ಗ್ರಾಮವೆಂಬ ಹಣೆಪಟ್ಟಿಯನ್ನೂ ಕಟ್ಟಿಕೊಂಡ ನಲವಾಗಲ ಗ್ರಾಮಸ್ಥರು ಅಕ್ಷರಶಃ ನಲುಗಿದ್ದಾರೆ.
ಸೌಲಭ್ಯವಂಚಿತವಾಗಿರುವ ಈ ಗ್ರಾಮದಲ್ಲಿ ಮಾಲಿನ್ಯ ಮಾತ್ರ ಧಾರಾಳ. ಇವರ ಕೂಗು ಸರ್ಕಾರಕ್ಕಾಗಲೀ, ವಿಪಕ್ಷ ನಾಯಕರಿಗಾಗಲೀ ಕೇಳದೇ ಇರುವುದು ವಿಪರ್ಯಾಸವೇ ಸರಿ. ಐವತ್ತು ವರ್ಷಗಳ ಹಿಂದೆ ತಾಲೂಕಿನ ನಲವಾಗಲ ಗ್ರಾಮಸ್ಥರಿಂದ ತುಂಗಭದ್ರಾ ನದಿ ದಡದಲ್ಲಿರುವ ಫಲವತ್ತಾದ ಕಪ್ಪು ಮಣ್ಣಿನ ಸಾವಿರ ಎಕರೆ ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ, 40 ವರ್ಷಗಳ ಹಿಂದೆ ಉತ್ಪಾದನೆ ಆರಂಭಿಸಿರುವ ಹರಿಹರ ಪಾಲಿಫೈಬರ್ಸ್ ಕಾರ್ಖಾನೆ ಉಗುಳುತ್ತಿರುವ ವಿಷಯುಕ್ತ ಗಾಳಿ, ತ್ಯಾಜ್ಯದಿಂದಾಗಿ ಗ್ರಾಮದ ತುಂಬೆಲ್ಲ ಜಾಲಿ ಗಿಡಗಳು ಬೆಳೆದು ನಿಂತಿವೆ.
ಎಲ್ಲಿದೆ ಈ ಗ್ರಾಮ?: ತಾಲೂಕಿನ ಗಡಿ ಅಂಚಿನಲ್ಲಿ ಉತ್ತರಾಭಿಮುಖವಾಗಿ ಹರಿದಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಹರಿಹರದಿಂದ ರಾಣಿಬೆನ್ನೂರು ಕಡೆಗೆ ಬರುವ ರೇಲ್ವೆ ಮಾರ್ಗಕ್ಕೆ ಬ್ರಿಟಿಷರು ಕಟ್ಟಿದ ಸೇತುವೆ ಇದೆ. ನದಿ ದಡದಲ್ಲಿ ಜಾಲಿ ಮರಗಳ ಮಧ್ಯೆ ಈ ಗ್ರಾಮ ಅಡಗಿದೆ. ಹಳೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕುಮಾರಪಟ್ಟಣಂ ಬಸ್ ನಿಲ್ದಾಣದಿಂದ 1 ಕಿ.ಮೀ. ಮತ್ತು ತಾಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ನಲವಾಗಲ ಗ್ರಾಮದಲ್ಲಿ ಸುಮಾರು 1050 ಮನೆಗಳಿವೆ. ಗ್ರಾಮದಿಂದ ಕೇವಲ 300 ಮೀ. ದೂರದಲ್ಲಿ ಹರಿಹರ ಪಾಲಿಫೈಬರ್ಸ್ ಮತ್ತು ಗ್ರಾಸಲಿನ್ ಎಂಬ ಎರಡು ಕಾರ್ಖಾನೆಗಳಿವೆ. ಅವುಗಳ ತ್ಯಾಜ್ಯದಿಂದ ಉಂಟಾಗುತ್ತಿರುವ ಮಾಲಿನ್ಯ ಹೇಳತೀರದು. ಇಂತಹ ಅಸಹನೀಯ ಸ್ಥಿತಿಯಲ್ಲಿ 40 ವರ್ಷಗಳಿಂದ 2400 ಜನರು ವಾಸಿಸುತ್ತಿದ್ದಾರೆ. ನಿತ್ಯ ಒಂದಿಲ್ಲ ಒಂದು ರೋಗಕ್ಕೆ ತುತ್ತಾಗುತ್ತಿದ್ದಾರೆ. ಪ್ರವಾಹದಿಂದ ಆಗಾಗ ತತ್ತರಿಸುತ್ತಿರುವ ಕಾರಣ ಸ್ಥಳಾಂತರ ಗ್ರಾಮವೆಂದು ಗುರುತಿಸಿಕೊಂಡಿದ್ದರಿಂದ ಸರ್ಕಾರಿ ಸೌಲಭ್ಯಗಳೂ ಸಿಗುತ್ತಿಲ್ಲ. ವಿಷ ಜಂತುಗಳ ಕಾಟ ಸಹಿಸಿಕೊಂಡು, ಜಾಲಿ ಗಿಡಗಳ ಮಧ್ಯೆ ಜನ ಸಮಸ್ಯೆಯಲ್ಲೇ ಬದುಕುತ್ತಿದ್ದಾರೆ.
ದೇಶದಲ್ಲೇ ಪ್ರಥಮ ಗ್ರಾಮ: ನದಿ ಪ್ರವಾಹದಿಂದ ತತ್ತರಿಸುತ್ತಿರುವ ಹಾಗೂ ಕಾರ್ಖಾನೆಗಳ ತ್ಯಾಜ್ಯಕ್ಕೆ ತುತ್ತಾಗಿರುವ ದೇಶದ ಮೊದಲ ಗ್ರಾಮ ಎಂಬ ಹಣೆಪಟ್ಟಿಯೂ ನಲವಾಗಲಕ್ಕಿದೆ. ಈ ಗ್ರಾಮದ ಸ್ಥಳಾಂತರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಜನರು ವಿಷಾನಿಲವನ್ನೇ ಉಸಿರಾಡಬೇಕಾಗಿದೆ.
ಉಗ್ರ ಹೋರಾಟಕ್ಕೆ ಸಿದ್ಧತೆ: ಹರಿಹರ ಪಾಲಿಫೈಬರ್ಸ್ ಮತ್ತು ಗ್ರಾಸಲಿನ್ ಕಾರ್ಖಾನೆಗಳಿಂದ ಉಂಟಾಗುವ ವಾಯು ಮತ್ತು ಜಲ ಮಾಲಿನ್ಯದಿಂದ ತತ್ತರಿಸಿರುವ ನಲವಾಗಲ ಗ್ರಾಮವನ್ನು ಸ್ಥಳಾಂತರಿಸುವುದಕ್ಕಾಗಿ ಕೂಡಿಯಾಲ ಗ್ರಾಮದ ಸರ್ವೆ ನಂ. 11ರಿಂದ 23ರಲ್ಲಿ ಬರುವ 34 ಎಕರೆ 14 ಗುಂಟೆ ಜಮೀನನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ. ನಾಲ್ಕು ವಿವಿಧ ಅಳತೆಯಲ್ಲಿ 453 ನಿವೇಶನಗಳನ್ನು ನಿರ್ಮಿಸಿ, 410 ಫಲಾನುಭವಿಗಳಿಗೆ ಪಟ್ಟಾ ನೀಡಿದ್ದಾಗಿ ಕಳೆದ ಜೂನ್ ತಿಂಗಳಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ತಿಳಿಸಲಾಗಿದೆ.
ಸ್ಥಳಾಂತರಕ್ಕಾಗಿ ಕಾಯ್ದಿರಿಸಿದ ಜಾಗೆ ಬದಲಾಗಿ ಬಿರ್ಲಾ ಕಂಪನಿ ಹಾಗೂ ಬಿರ್ಲಾ ವರ್ಕರ್ಸ್ ಕಾಲನಿ ಹತ್ತಿರವಿರುವ 120 ಎಕರೆ ಜಮೀನನ್ನು ನಲವಾಗಲ ಗ್ರಾಮ ನಿರ್ಮಾಣಕ್ಕಾಗಿ ನೀಡಿ ಎಲ್ಲರಿಗೂ ಮನೆ ಕಟ್ಟಿಕೊಟ್ಟಲ್ಲಿ ಮಾತ್ರ ಹೋಗಲು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಕೆ.ಬಿ. ಕೋಳಿವಾಡರಲ್ಲಿ ಮನವಿ ಮಾಡಿದ್ದಾಗಿ ನಲವಾಗಲ ಗ್ರಾಮ ಸ್ಥಳಾಂತರ ಹೊರಾಟ ಸಮಿತಿ ಅಧ್ಯಕ್ಷ ಕೆ. ಬೇವಿನಹಳ್ಳಿ ಮಹೇಶ, ಸದಸ್ಯರಾದ ಪರಮೇಶ ಚಿನ್ನಣ್ಣನವರ, ಬಸವರಾಜ ಮೂಡಬಾಗಿಲ, ಕೆಂಚಪ್ಪ ಹತ್ತಲಗಿ, ಎಚ್.ಎಲ್. ಕರೂರು, ಆಂಜನೇಯ, ಬಿ. ಪುಟ್ಟಪ್ಪ ಓಲೇಕಾರ, ಪರಶುರಾಮ ಗಾಡಿ, ಆಂಜನೇಯ ಓಬೂಜಿಹಳ್ಳಿ ತಿಳಿಸಿದರು.
-ಸಾಬ್ಜನ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement