ಕಾಮಗಾರಿ ಕಳಪೆಯಾದರೆ ಅಧಿಕಾರಿಗಳೇ ಹೊಣೆ: ಶಾಸಕ ಯು.ಬಿ. ಬಣಕಾರ
ಹಿರೇಕೆರೂರು: ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಕಾಮಗಾರಿಗಳನ್ನು ಮಂಜೂರು ಮಾಡಿದ್ದು, ಅವುಗಳ ನಿರ್ವಹಣೆ ಕಳಪೆಯಾದಲ್ಲಿ ಆಯಾ ಇಲಾಖೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಮುಂದಿನ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು. ತಾಲೂಕಿನ ಕಚವಿ ಗ್ರಾಮದಲ್ಲಿ ರು. 10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ, ತಾಲೂಕಿನ ಶ್ರೀ ರಾಮನಕೊಪ್ಪ ಗ್ರಾಮದ ಬಳಿ ಹಂಸಬಾವಿ ಹಿರೇಕೆರೂರು ರಸ್ತೆಯ ಆಯ್ದ ಭಾಗದಲ್ಲಿ ರು. 87 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ, ಯತ್ತಿನಹಳ್ಳಿ ಗ್ರಾಮದಲ್ಲಿ ರು. 10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಒಟ್ಟು ರು. 1.29 ಕೋಟಿ ವೆಚ್ಚದ ಈ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿಗಾ ವಹಿಸಬೇಕು. ಗ್ರಾಮಸ್ಥರೂ ಕಾಮಗಾರಿ ಪರಿಶೀಲಿಸಿ, ಗುಣಮಟ್ಟ ಇಲ್ಲದಿದ್ದರೆ ತಮ್ಮ ಗಮನಕ್ಕೆ ತರಬೇಕು ಎಂದರು. ಜಿಪಂ ಸದಸ್ಯೆ ಬಸಮ್ಮ ಅಬಲೂರ, ತಾಪಂ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಗಾಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ, ತಾಪಂ ಸದಸ್ಯರಾದ ಬಸನಗೌಡ ಕಳ್ಳೇರ, ರೂಪಾ ಆಡೂರ, ಶಿವಣ್ಣ ಗಡಿಯಣ್ಣನವವರ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಸೆಣಬಿನ, ಉಪಾಧ್ಯಕ್ಷ ದ್ಯಾಮಪ್ಪ ಸೊಟ್ಟಪ್ಪನವರ, ಜಿಲ್ಲಾ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಎಚ್.ಡಿ. ಶಾಂತಕುಮಾರ, ಲೋಕೋಪಯೋಗಿ ಸಹಾಯಕ ಅಭಿಯಂತ ಎಂ.ಬಿ. ತುರುಮರಿ, ಮುಖಂಡರಾದ ಪ್ರಭು ಮಳವಳ್ಳಿ, ಶಿವಲಿಂಗಪ್ಪಗೌಡ ಗೌಡ್ರ, ರಾಮಪ್ಪ ಹೂಗಾರ, ಹುಚ್ಚಪ್ಪ ಬಡಪ್ಪನವರ, ದಾದಾಫೀರ ರಾಣಿಬೆನ್ನೂರ, ಶಿವನಗೌಡ ಪಟ್ಟಣಶೆಟ್ಟಿ ಇದ್ದರು.
ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಿ: ಸುರೇಶಗೌಡ
ಬ್ಯಾಡಗಿ: ಅಗತ್ಯ ಸಂದರ್ಭಗಳಲ್ಲಿ ಮಕ್ಕಳನ್ನು ದೇಶದ ಯಾವುದೇ ಸೇವೆಗೆ ಸಿದ್ಧರಾಗಿಸುವುದೇ ಪ್ರತಿಭಾ ಕಾರಂಜಿ ಉದ್ದೇಶ ಎಂದು ಮಾಜಿ ಶಾಸಕ ಸುರೇಶಗೌಡ ಹೇಳಿದರು.
ಮಹಾಶಯ ಧರ್ಮಪಾಲ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಪ್ರೌಢಶಾಲೆಗಳ ವಿಭಾಗ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ, ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸುವ ಜತೆಗೆ ನೂತನ ಅನ್ವೇಷಣೆಗಳಿಗೆ ಸಿದ್ಧವಾಗುವಂತೆ ಮಾಡುವ ಅನಿವಾರ್ಯತೆ ಇದೆ. ಹೊಸ ಆವಿಷ್ಕಾರಗಳನ್ನು ಪ್ರಕಟಿಸುವ ಮೂಲಕ ಮುಂದೆ ಒದಗಬಹುದಾದ ಸಮಸ್ಯೆಗಳಿಗೆ ಈಗಲೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಪರಿಪೂರ್ಣತೆ ಸಾಧಿಸುವ ಮಟ್ಟಿಗೆ ಮಕ್ಕಳನ್ನು ಸಿದ್ಧಗೊಳಿಸಬೇಕಾಗಿದೆ ಎಂದರು. ಶೈಕ್ಷಣಿಕ ಕ್ಷೇತ್ರವನ್ನು ಪ್ರಬಲಗೊಳಿಸಿದಾಗ ಮಾತ್ರ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ. ಆದರೆ ಕೆಲ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣ ಕ್ಷೇತ್ರವನ್ನು ಹಣ ಮಾಡುವ ಮಾಧ್ಯಮವಾಗಿ ಬಳಸಿಕೊಳ್ಳುತ್ತಿರುವುದು ದುರಂತ. ಮಕ್ಕಳಲ್ಲಿರುವ ಪ್ರತಿಭೆ ಬೆಳಗಲು ಶಿಕ್ಷಕರು ಕ್ರಮ ಕೈಗೊಳ್ಳಬೇಕು, ಅವಕಾಶ ಒದಗಿಸಬೇಕು ಎಂದರು. ಬ್ಯಾಡಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮುರಳಿ ಜೋಷಿ, ಸಮನ್ವಯಾಧಿಕಾರಿ ಜಿ. ಸುಮಾ. ಎಸ್ಎಸ್ಪಿಎನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಕೆ. ಹೊಸಮನಿ, ಬಿ.ಆರ್. ಅಂಬೇಡ್ಕರ್ ಶಾಲೆಯ ಮುಖ್ಯಶಿಕ್ಷಕ ರಾಮಗಿರಿ ಇದ್ದರು. ಮಹಾಶಯ ಧರ್ಮಪಾಲ ಶಾಲೆ ಮುಖ್ಯ ಶಿಕ್ಷಕಿ ಪಾರ್ವತಿ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ರೇಣುಕಾ ಬೋವಿ ನಿರೂಪಿಸಿದರು.
ಕಾನೂನು ಜ್ಞಾನ ಎಲ್ಲರಿಗೂ ಬೇಕು: ನ್ಯಾ. ಪ್ರಮೋದ
ಬ್ಯಾಡಗಿ: ಕಾನೂನಿನ ಅರಿವಿಲ್ಲದೆ ಬಹುತೇಕ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿದ ಉದಾಹರಣೆಗಳಿವೆ. ಕಾನೂನು ಎಲ್ಲರಿಗೂ ಶಿಕ್ಷಣ ಅಗತ್ಯವಿದೆ ಎಂದು ದಿವಾಣಿ ನ್ಯಾಯಾಧೀಶ ಬಿ.ಜಿ. ಪ್ರಮೋದ ಪ್ರತಿಪಾದಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಜರುಗಿದ ಕಾನೂನು ಸೇವಾ ದಿನಾಚರಣೆ, ಕಾನೂನು ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನಿನ ಸಮಗ್ರ ಜ್ಞಾನವಿಲ್ಲದೆ ಚಿಕ್ಕ ಸಮಸ್ಯೆಗಳೂ ಬೃಹದಾಕಾರ ಪಡೆಯುತ್ತವೆ. ಇದರಿಂದ ಸಾರ್ವಜನಿಕರು ಸಮಯ ಹಾಗೂ ಹಣ ಪೋಲು ಮಾಡುವಂತಾಗಿದೆ. ನ್ಯಾಯಾಲಯವೇ ಅಂತಿಮ ಪರಿಹಾರ ಎಂಬಂತೆ ವರ್ತಿಸುತ್ತಿದ್ದಾರೆ ಎಂದರು. ಕಾನೂನಿನ ಸೂಕ್ಷ್ಮ ಅರ್ಥ ಮಾಡಿಕೊಂಡು, ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು. ಕೆಲವೊಮ್ಮೆ ಕಾನೂನಿನ ಅರಿವಿಲ್ಲದೆ ತಪ್ಪಾಗಿ ನಡೆದುಕೊಳ್ಳುವ ಮೂಲಕ ಅನವಶ್ಯಕವಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಫ್.ಎಂ. ಮುಳಗುಂದ ಮಾತನಾಡಿ, ಕಾನೂನಿನ ನೆರವು ಪಡೆದು ತಮ್ಮ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳುವ ಮಹತ್ತರ ಉದ್ದೇಶದಿಂದಲೇ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜೀವನದ ಎಲ್ಲ ಸಮಸ್ಯೆಗಳಿಗೆ ಪರಿವಾರವಿದೆ. ಹಣಕಾಸು ಸಂಸ್ಥೆ, ವಾಹನ, ಭೂಮಿ ಖರೀದಿಗೆ ಸಂಬಂಧಿಸಿದ ಸಾಮಾನ್ಯ ವ್ಯಾಜ್ಯಗಳ ಜ್ಞಾನವನ್ನು ಹೊಂದಬೇಕು ಎಂದರು. ಸಂಘದ ಉಪಾಧ್ಯಕ್ಷ ಆರ್.ವಿ. ಬೆಳಕೇರಿಮಠ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎಸ್.ಸಿ. ಶಿಡೇನೂರು, ಬಿ.ಎಸ್. ಚೂರಿ, ಪ್ರಭು ಶೀಗಿಹಳ್ಳಿ, ಎಂ.ಜೆ. ಮುಲ್ಲಾ, ಎಂ.ಕೆ. ವೀರನಗೌಡ್ರ, ಭಾರತಿ ಕುಲಕರ್ಣಿ, ಎನ್.ಪಿ. ಕೋಪರ್ಡೆ ಇದ್ದರು.