ಖಾಸಗಿ ಶಾಲೆ ಮಕ್ಕಳಿಗೆ ಬಿಸಿಯೂಟ ಪುನಾರಂಭ
ಬ್ಯಾಡಗಿ: ತಾಲೂಕಿನ ಅನುದಾನಿತ ಖಾಸಗಿ ಶಾಲೆಗಳಲ್ಲಿ ಒಂದು ವಾರದಿಂದ ಸ್ಥಗಿತಗೊಂಡಿದ್ದ ಬಿಸಿಯೂಟ ಬುಧವಾರ ಪುನಾರಂಭಗೊಂಡಿದೆ. ಖಾಸಗಿ ಅನುದಾನಿತ ಶಾಲೆ ಬಿಸಿಯೂಟ ತಯಾರಕರು ಹಾಗೂ ಜಿಲ್ಲಾ ಪಂಚಾಯತ್ ನಡುವಿನ ಹಗ್ಗಜಗ್ಗಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ತಾಲೂಕಿನ 18 ಖಾಸಗಿ ಅನುದಾನಿತ ಖಾಸಗಿ ಶಾಲೆಗಳಿಗೆ ಹರಿಹರದ ಆದರ್ಶ ರೂರಲ್ ಸೊಸೈಟಿ ಬಿಸಿಯೂಟ ಪೂರೈಸಲು ಹೊರ ಗುತ್ತಿಗೆ ಪಡೆದಿತ್ತು. ಆದರೆ ಸದರಿ ಸಂಸ್ಥೆ ವಿತರಿಸುತ್ತಿರುವ ಆಹಾರ ಕಳಪೆ ಎಂದು ಆರೋಪಿಸಿ ನ. 19ರಂದು ವಿದ್ಯಾರ್ಥಿಗಳು ಹಾಗೂ ಪಾಲಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು.
ಹತ್ತಿರದ ಶಾಲೆಯಿಂದ: ಬಿಸಿಯೂಟವಿಲ್ಲದೆ ವಾರದಿಂದ ಊಟಕ್ಕಾಗಿ ಪರದಾಡುತ್ತಿದ್ದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿರುವ ಶಿಕ್ಷಣ ಇಲಾಖೆ, ಸಮೀಪದ ಸರ್ಕಾರಿ ಶಾಲೆಗಳಿಂದ ಬಿಸಿಯೂಟ ಪೂರೈಸುತ್ತಿದೆ.
ಈ ಕುರಿತು ಮಾತನಾಡಿದ ಜಿನ್ನಾ ಹಲಗೇರಿ, ಹೊರಗುತ್ತಿಗೆ ನೀಡಿರುವುದರಲ್ಲೇ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಪ್ರಕರಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ದಾಖಲೆಗಳನ್ನು ನೀಡುವುದಾಗಿ ತಿಳಿಸಿದರು.
ಹೋರಾಟ ನಿಲ್ಲುವುದಿಲ್ಲ: ಗಂಗಣ್ಣ ಎಲಿ ಮಾತನಾಡಿ, ಸರ್ಕಾರಿ ಶಾಲೆಗಳಂತೆ ಖಾಸಗಿ ಶಾಲೆಗಳಲ್ಲೂ ಬಿಸಿಯೂಟ ತಯಾರಿಸಿ ವಿದ್ಯಾರ್ಥಿಗಳಿಗೆ ವಿತರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ಬಿಸಿಯೂಟ ಸರ್ಕಾರ ಬಡ ಮಕ್ಕಳಿಗೆ ನೀಡಿರುವ ಯೋಜನೆ. ಇದರಲ್ಲಿ ಯಾರೇ ಹಸ್ತಕ್ಷೇಪ ನಡೆಸಿದರೂ ಸಾಂಘಿಕ ಹೋರಾಟ ಮಾಡುವುದಾಗಿ ತಿಳಿಸಿದರು.
ಸಮೀಕ್ಷೆ ಪ್ರಾರಂಭ
ಜಿಪಂ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ 8 ತಜ್ಞರ ಸಮಿತಿಯೊಂದು ತಾಲೂಕಿನಲ್ಲಿ ಬಿಸಿಯೂಟ ಸಮೀಕ್ಷೆ ಆರಂಭಿಸಿದೆ. ಎಲ್ಲ ಶಾಲೆಗಳಿಗೆ ತೆರಳಿದ ಸಮಿತಿ ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳ ವೈಯಕ್ತಿಕ ಅಭಿಪ್ರಾಯವನ್ನು ಸಂಗ್ರಹಿಸಿದೆ. ಡಿಡಿಪಿಐ ಎಸ್.ಬಿ. ಕೊಡ್ಲಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಝಡ್.ಎಂ. ಖಾಜಿ ಸಮಿತಿಯಲ್ಲಿದ್ದಾರೆ.